ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ–ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿ ರೋಚಕ ತಿರುವು ಪಡೆದುಕೊಂಡಿರುವ ನಡುವೆ, ನಾಳೆ (ಡಿಸೆಂಬರ್ 14) ಧರ್ಮಶಾಲಾದ ಹೆಚ್‌ಪಿಸಿ ಸ್ಟೇಡಿಯಂನಲ್ಲಿ ನಡೆಯಲಿರುವ ಮೂರನೇ ಟಿ20 ಪಂದ್ಯಕ್ಕೆ ಟೀಮ್ ಇಂಡಿಯಾ ಹೊಸ ತಂತ್ರದೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ.
ಮುಲ್ಲನ್‌ಪುರ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತಕ್ಕೆ ಎದುರಾದ ಭಾರೀ ಸೋಲು, ತಂಡದ ಆಯ್ಕೆ ಮೇಲೆ ನೇರ ಪರಿಣಾಮ ಬೀರುವ ನಿರೀಕ್ಷೆ ಇದೆ.
ಸೋಲಿನ ಬಳಿಕ ತಂಡದ ಸಂಯೋಜನೆಯಲ್ಲಿ ಬದಲಾವಣೆ ಮಾಡುವ ಬಗ್ಗೆ ಟೀಮ್ ಮ್ಯಾನೇಜ್‌ಮೆಂಟ್ ಗಂಭೀರ ಚಿಂತನೆ ನಡೆಸುತ್ತಿದೆ. ವಿಶೇಷವಾಗಿ ಆರಂಭಿಕ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಕಳೆದ ಎರಡು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿರುವುದರಿಂದ, ಅವರ ಸ್ಥಾನದಲ್ಲಿ ಸಂಜು ಸ್ಯಾಮ್ಸನ್‌ಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಇನಿಂಗ್ಸ್ ಆರಂಭಿಸಿದರೆ, ಮೂರನೇ ಕ್ರಮಾಂಕದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ನಡೆಸುವ ನಿರೀಕ್ಷೆ ಇದೆ.
ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ ಸ್ಥಾನ ಪಡೆಯುವ ಸಾಧ್ಯತೆ ಇದ್ದು, ಆಲ್‌ರೌಂಡರ್‌ಗಳಾಗಿ ಶಿವಂ ದುಬೆ ಮತ್ತು ಹಾರ್ದಿಕ್ ಪಾಂಡ್ಯ ತಂಡದ ಬ್ಯಾಲೆನ್ಸ್ ನೋಡಿಕೊಳ್ಳಲಿದ್ದಾರೆ. ವಿಕೆಟ್ ಕೀಪರ್ ಜವಾಬ್ದಾರಿಯನ್ನು ಈ ಪಂದ್ಯದಲ್ಲೂ ಜಿತೇಶ್ ಶರ್ಮಾ ವಹಿಸಿಕೊಳ್ಳುವ ಸಾಧ್ಯತೆ ಇದೆ.
ಬೌಲಿಂಗ್ ವಿಭಾಗದಲ್ಲೂ ಬದಲಾವಣೆ ನಿರೀಕ್ಷಿಸಲಾಗಿದ್ದು, ಅಕ್ಷರ್ ಪಟೇಲ್ ಅವರ ಸ್ಥಾನಕ್ಕೆ ಕುಲ್ದೀಪ್ ಯಾದವ್ ಅಥವಾ ಹರ್ಷಿತ್ ರಾಣಾಗೆ ಅವಕಾಶ ಸಿಗಬಹುದು. ಅನುಭವದ ಕಾರಣ ಕುಲ್ದೀಪ್ ಯಾದವ್ ಆಯ್ಕೆಗೆ ಹೆಚ್ಚು ಅವಕಾಶವಿದೆ ಎನ್ನಲಾಗುತ್ತಿದೆ.
ಇನ್ನುಳಿದಂತೆ ವರುಣ್ ಚಕ್ರವರ್ತಿ, ಜಸ್‌ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ಬೌಲಿಂಗ್ ದಾಳಿಯನ್ನು ಮುನ್ನಡೆಸುವ ನಿರೀಕ್ಷೆ ಇದೆ. ಈ ಬದಲಾವಣೆಗಳು ಭಾರತಕ್ಕೆ ಧರ್ಮಶಾಲಾದಲ್ಲಿ ಹೊಸ ಶಕ್ತಿ ನೀಡಬಹುದೇ ಎಂಬುದನ್ನು ಕಾದು ನೋಡಬೇಕಿದೆ.

