ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯ್‌ಪುರದ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಎರಡನೇ ಏಕದಿನ ಪಂದ್ಯ ಆರಂಭಗೊಂಡಿದೆ. ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡ ಮೊದಲು ಬೌಲಿಂಗ್ ಮಾಡಲು ತೀರ್ಮಾನಿಸಿದ್ದು, ಟೀಮ್ ಇಂಡಿಯಾ ಬ್ಯಾಟಿಂಗ್ ಆರಂಭಿಸಿದೆ. ಈ ಪಂದ್ಯದಲ್ಲೂ ಭಾರತ ತಂಡವನ್ನು ಮುನ್ನಡೆಸುತ್ತಿರುವುದು ಕೆಎಲ್ ರಾಹುಲ್.
ಈ ಪಂದ್ಯ ಸೌತ್ ಆಫ್ರಿಕಾದ ಪಾಲಿಗೆ ಅತ್ಯಂತ ಮಹತ್ವದಾಗಿದೆ. ಏಕೆಂದರೆ ಇಂದು ಭಾರತ ಗೆದ್ದರೆ ಎರಡು ಪಂದ್ಯಗಳಲ್ಲೂ ಜಯ ಸಾಧಿಸಿ 2–0 ಅಂತರದಿಂದ ಸರಣಿಯನ್ನು ಕೈವಶ ಮಾಡಿಕೊಳ್ಳಲಿದೆ. ಹೀಗಾಗಿ ಸರಣಿ ಜೀವಂತವಿರಿಸಿಕೊಳ್ಳಬೇಕಾದ ಅನಿವಾರ್ಯ ಒತ್ತಡದಲ್ಲಿ ಆಫ್ರಿಕಾ ಕಣಕ್ಕಿಳಿದಿದೆ. ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿದ ಭಾರತ ಈ ಸಲವೂ ಆತ್ಮವಿಶ್ವಾಸದಿಂದ ಆಟಕ್ಕೆ ಇಳಿದಿದೆ.
ಇಂದು ಟೀಮ್ ಇಂಡಿಯಾ ತನ್ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ಯಾವುದೇ ಬದಲಾವಣೆ ಮಾಡದೆ ಮೊದಲ ಪಂದ್ಯದಲ್ಲಿದ್ದ ಅದೇ ತಂಡವನ್ನು ಮುಂದುವರೆಸಿದೆ. ಸೌತ್ ಆಫ್ರಿಕಾ ತಂಡವನ್ನು ಟೆಂಬಾ ಬವುಮಾ ಮುನ್ನಡೆಸುತ್ತಿದ್ದು, ಕ್ವಿಂಟನ್ ಡಿ ಕಾಕ್, ಐಡೆನ್ ಮಾರ್ಕ್ರಾಮ್, ಡೆವಾಲ್ಡ್ ಬ್ರೆವಿಸ್ ಸೇರಿದಂತೆ ಬಲಿಷ್ಠ ಬಳಗ ಕಣದಲ್ಲಿದೆ.

