ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುವಾಹಟಿಯಲ್ಲಿ ನವೆಂಬರ್ 22ರಿಂದ ಆರಂಭವಾಗಲಿರುವ ಎರಡನೇ ಟೆಸ್ಟ್‌ಗೂ ಮುನ್ನ ಟೀಮ್ ಇಂಡಿಯಾ ಹೊಸ ಚರ್ಚೆಗೆ ಕಾರಣವಾಗಿದೆ. ಕೋಲ್ಕತ್ತಾದಲ್ಲಿ ನಡೆದ ಮೊದಲ ಟೆಸ್ಟ್‌ನ್ನು 30 ರನ್‌ಗಳಿಂದ ಸೋತಿರುವ ಭಾರತ, ಸರಣಿಯನ್ನು ಸಮಬಲಕ್ಕೆ ತರುವ ಗುರಿ ಹೊಂದಿದೆ. ಆದರೆ ಇದರ ನಡುವೆ ದಕ್ಷಿಣ ಆಫ್ರಿಕಾ ವಿರುದ್ಧ ನವೆಂಬರ್ 30ರಿಂದ ಆರಂಭವಾಗಲಿರುವ ಏಕದಿನ ಸರಣಿಗೆ ಎರಡು ಮುಖ್ಯ ಆಟಗಾರರು ಅಲಭ್ಯರಾಗುವ ಸಾಧ್ಯತೆ ಗಂಭೀರವಾಗಿ ಕೇಳಿಬರುತ್ತಿದೆ.
ಟೀಮ್ ಇಂಡಿಯಾದ ಪ್ರಮುಖ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಏಕದಿನ ಸರಣಿಯಿಂದ ಹೊರಗುಳಿಯುವ ಸಾಧ್ಯತೆ ವ್ಯಕ್ತವಾಗಿದೆ. ಹಾರ್ದಿಕ್ ದುಬೈನಲ್ಲಿ ಏಷ್ಯಾಕಪ್ ಫೈನಲ್‌ಗೂ ಮುನ್ನ ಆದ ಗಾಯದಿಂದ ಚೇತರಿಸಿಕೊಳ್ಳುತ್ತಿರುವಾಗ, ಬುಮ್ರಾ ನಿರಂತರ ಟೆಸ್ಟ್ ಆಟದಿಂದಾಗಿ ಕಾರ್ಯಭಾರ ಒತ್ತಡದಲ್ಲಿದ್ದಾರೆ. ಮುಂದಿನ ವರ್ಷ ಭಾರತದಲ್ಲೇ ನಡೆಯಲಿರುವ ಟಿ20 ವಿಶ್ವಕಪ್ ಗಮನದಲ್ಲಿಟ್ಟು, ಈ ಇಬ್ಬರಿಗೆ ವಿಶ್ರಾಂತಿ ನೀಡುವ ಮಾತು BCCI ವಲಯದಲ್ಲಿ ಗಂಭೀರವಾಗಿ ಚರ್ಚೆಯಾಗುತ್ತಿದೆ.
ಮೂರು ಪಂದ್ಯಗಳ ಏಕದಿನ ಸರಣಿ, ಬಳಿಕ ಡಿಸೆಂಬರ್ 9ರಿಂದ ಐದು ಟಿ20 ಪಂದ್ಯಗಳ ಸರಣಿ ನಡೆಯಲಿದ್ದು, ಹಾರ್ದಿಕ್ ಈಗಾಗಲೇ ಚುಟುಕು ಕ್ರಿಕೆಟ್‌ಗೆ ತಾನು ಸಂಪೂರ್ಣವಾಗಿ ಸಜ್ಜಾಗುತ್ತಿರುವುದಾಗಿ ಅಭ್ಯಾಸದ ಮೂಲಕ ಸೂಚಿಸಿದ್ದಾರೆ.

