ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲೇ ಭರ್ಜರಿ ಪ್ರದರ್ಶನ ನೀಡಿ ಮುನ್ನಡೆ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ಪರ ಯಶಸ್ವಿ ಜೈಸ್ವಾಲ್ ಮತ್ತು ಶುಭ್‌ಮನ್ ಗಿಲ್ ಶತಕ ಬಾರಿಸಿ ತಂಡದ ಭದ್ರವಾದ ಅಡಿಪಾಯ ಹಾಕಿದರು.
ಯಶಸ್ವಿ ಜೈಸ್ವಾಲ್ 175 ಮತ್ತು ಶುಭ್‌ಮನ್ ಗಿಲ್ 129 ರನ್‌ಗಳ ಅದ್ಭುತ ಆಟದ ನೆರವಿನಿಂದ ಭಾರತ ಮೊದಲ ಇನಿಂಗ್ಸ್‌ನಲ್ಲಿ ಕೇವಲ ಐದು ವಿಕೆಟ್ ಕಳೆದುಕೊಂಡು 518 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ಈ ಶತಕಗಳಿಂದ ಭಾರತ ತಂಡದ ಆರಂಭ ಶ್ರೇಷ್ಠವಾಗಿದ್ದು, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸಹ ಸಹಕಾರ ನೀಡಿದರು.
ಇದರ ವಿರುದ್ಧ ಬ್ಯಾಟ್ ಮಾಡಲು ಬಂದ ವೆಸ್ಟ್ ಇಂಡೀಸ್ ತಂಡವು ಆರಂಭದಲ್ಲೇ ತತ್ತರಿಸಿತು. ಎರಡನೇ ದಿನದಾಟದಲ್ಲಿ ರವೀಂದ್ರ ಜಡೇಜಾ ಮೂರು ವಿಕೆಟ್‌ಗಳನ್ನು ಪಡೆದು ಎದುರಾಳಿ ತಂಡಕ್ಕೆ ಆಘಾತ ನೀಡಿದರು. ನಂತರ ಮೂರನೇ ದಿನದಾಟದಲ್ಲಿ ಕುಲ್ದೀಪ್ ಯಾದವ್ ಮಿಂಚಿ 5 ವಿಕೆಟ್ ಕಬಳಿಸಿದರು. ಇದರ ಪರಿಣಾಮವಾಗಿ ವೆಸ್ಟ್ ಇಂಡೀಸ್ ಕೇವಲ 248 ರನ್‌ಗಳಿಗೆ ಆಲೌಟ್ ಆಯಿತು.
ಭಾರತದ ಪರ ಕುಲ್ದೀಪ್ ಯಾದವ್ 26.5 ಓವರ್‌ಗಳಲ್ಲಿ 82 ರನ್ ನೀಡಿ 5 ವಿಕೆಟ್ ಪಡೆದರೆ, ಜಡೇಜಾ 19 ಓವರ್‌ಗಳಲ್ಲಿ 46 ರನ್ ನೀಡಿ 3 ವಿಕೆಟ್ ಕಬಳಿಸಿದರು. ಇಬ್ಬರ ಸ್ಪಿನ್ ಜೋಡಿ ಪ್ರದರ್ಶನದ ಫಲವಾಗಿ ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ 270 ರನ್‌ಗಳ ಭರ್ಜರಿ ಮುನ್ನಡೆ ಪಡೆದುಕೊಂಡಿದೆ.
ಈ ಭರ್ಜರಿ ಮುನ್ನಡೆಯಿಂದ ಟೀಮ್ ಇಂಡಿಯಾ ಪಂದ್ಯದಲ್ಲಿ ಮೇಲುಗೈ ಸಾಧಿಸಿದ್ದು, ಮುಂದಿನ ಇನಿಂಗ್ಸ್‌ನಲ್ಲಿ ಸರಣಿಯ ಗೆಲುವಿನತ್ತ ದೃಢವಾಗಿ ಹೆಜ್ಜೆ ಇಟ್ಟಿದೆ.