January17, 2026
Saturday, January 17, 2026
spot_img

ರಸ್ತೆ ಅಪಘಾತದಲ್ಲಿ ಭಾರತೀಯ ಕ್ರಿಕೆಟಿಗ ಸಾವು: ಕಂಬನಿ ಮಿಡಿದ ಟಿಸಿಎ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಿರಿಯ ವಿಶ್ವಕಪ್​ನಲ್ಲಿ ಭಾರತ ಅಂಡರ್-19 ತಂಡವನ್ನು ಪ್ರತಿನಿಧಿಸಿದ್ದ ರಾಜೇಶ್ ಬಾನಿಕ್ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.

ಅಕ್ಟೋಬರ್ 31 ರ ರಾತ್ರಿ ಪಶ್ಚಿಮ ತ್ರಿಪುರಾದ ಆನಂದನಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ರಾಜೇಶ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಅಗರ್ತಲಾದ ಜಿಬಿಪಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಗೆ ತಲುಪುವ ಮುನ್ನವೇ ರಾಜೇಶ್ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

2002-03ರಲ್ಲಿ ತ್ರಿಪುರ ಪರ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ್ದ ರಾಜೇಶ್ ಬಾನಿಕ್ 42 ಪ್ರಥಮ ದರ್ಜೆ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಈ ವೇಳೆ 6 ಅರ್ಧಶತಕಗಳೊಂದಿಗೆ 1469 ರನ್ ಕಲೆಹಾಕಿದ್ದರು.

ಹಾಗೆಯೇ ಲಿಸ್ಟ್ ಎ ಕ್ರಿಕೆಟ್​ನಲ್ಲಿ 24 ಪಂದ್ಯಗಳನ್ನಾಡಿದ್ದ ಅವರು 1 ಶತಕದೊಂದಿಗೆ 378 ರನ್ ಕಲೆಹಾಕಿದ್ದರು. ಅಲ್ಲದೆ 8 ವಿಕೆಟ್ ಕಬಳಿಸಿ ಮಿಂಚಿದ್ದರು. ಇನ್ನು 18 ಟಿ20 ಪಂದ್ಯಗಳನ್ನಾಡಿರುವ ರಾಜೇಶ್ ಬಾನಿಕ್ 203 ರನ್​ ಕಲೆಹಾಕಿದ್ದರು.

ದೇಶೀಯ ಕ್ರಿಕೆಟ್​​ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮತ್ತು ನುರಿತ ಲೆಗ್ ಬ್ರೇಕ್ ಬೌಲರ್ ಆಗಿ ಗುರುತಿಸಿಕೊಂಡಿದ್ದ ರಾಜೇಶ್ ಬಾನಿಕ್ ಈ ಹಿಂದೆ ಕಾಸ್ಟ್‌ಕಟರ್ ವರ್ಲ್ಡ್ ಚಾಲೆಂಜ್ ಟೂರ್ನಿಗೆ ಆಯ್ಕೆಯಾಗಿದ್ದರು. ಈ ಪಂದ್ಯಾವಳಿಯಲ್ಲಿ ಬಾನಿಕ್ ಭಾರತದ ಮಾಜಿ ಕ್ರಿಕೆಟಿಗರಾದ ಅಂಬಟಿ ರಾಯುಡು ಮತ್ತು ಇರ್ಫಾನ್ ಪಠಾಣ್ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದರು.

ಅಷ್ಟೇ ಅಲ್ಲದೆ 2016-17ರ ರಣಜಿ ಟ್ರೋಫಿ ಸೀಸನ್​ನಲ್ಲಿ ರಾಜೇಶ್ ಬಾನಿಕ್ ತ್ರಿಪುರ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದರು. ಇವರ ನಾಯಕತ್ವದಲ್ಲೇ ತ್ರಿಪುರ ತಂಡವು ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ತಲುಪಿ ಇತಿಹಾಸ ನಿರ್ಮಿಸಿತ್ತು.

ರಾಜೇಶ್ ಬಾನಿಕ್ ಪ್ರತಿಭಾನ್ವಿತ ಕ್ರಿಕೆಟಿಗ ಮತ್ತು 16 ವರ್ಷದೊಳಗಿನವರ ಕ್ರಿಕೆಟ್ ತಂಡದ ಆಯ್ಕೆದಾರರಾಗಿಯೂ ಕಾರ್ಯ ನಿರ್ವಹಿಸಿದ್ದರು. ಇಂತಹ ಪ್ರತಿಭಾನ್ವಿತ ವ್ಯಕ್ತಿಯನ್ನು ನಾವು ಕಳೆದುಕೊಂಡಿರುವುದು ತುಂಬಾ ದುರದೃಷ್ಟಕರ. ಈ ಘಟನೆಯಿಂದ ನಮಗೆ ಆಘಾತವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ತ್ರಿಪುರ ಕ್ರಿಕೆಟ್ ಸಂಸ್ಥೆ (ಟಿಸಿಎ) ಕಾರ್ಯದರ್ಶಿ ಸುಬ್ರತಾ ಡೇ ಅಂತಿಮ ನಮನ ಸಲ್ಲಿಸಿದ್ದಾರೆ.

Must Read

error: Content is protected !!