ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಫ್ಘಾನಿಸ್ತಾನ ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಆಮಿರ್ ಖಾನ್ ಮುತ್ತಖಿ ಭಾರತ ಪ್ರವಾಸದಲ್ಲಿದ್ದು, ಇಂದು ಅವರು ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರ ಜೊತೆ ಮಹತ್ವದ ಮಾತುಕತೆ ನಡೆಸಿದ್ದು, ಈ ವೇಳೆ ಕಾಬೂಲ್‌ನಲ್ಲಿ ರಾಯಭಾರ ಕಚೇರಿ ಮತ್ತೆ ತೆರೆಯಲು ಭಾರತ ಮುಂದಾಗಿದೆ.
ಉಭಯ ನಾಯಕರು ಇಂದು ದೆಹಲಿಯಲ್ಲಿ ಮಹತ್ವದ ಚರ್ಚೆ ನಡೆಸಿದ್ದು, ಎರಡೂ ರಾಷ್ಟ್ರಗಳ ನಡುವಿನ ಬಾಂಧವ್ಯ ಐತಿಹಾಸಿಕವಾದುದು ಮತ್ತು ನೈಸರ್ಗಿಕ ವಿಕೋಪಗಳು ಸೇರಿದಂತೆ ಯಾವುದೇ ತೊಂದರೆ ಎದುರಾದಾಗಲೆಲ್ಲಾ ಅಫ್ಘಾನ್ ಜನರಿಗೆ ಭಾರತ ಯಾವಾಗಲೂ ಸಹಾಯ ಮಾಡಿದೆ ಎಂದು ಜೈಶಂಕರ್ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಖಿ ಅವರಿಗೆ ತಿಳಿಸಿದರು.
ಆ ಮೂಲಕ ಭಾರತ ಮತ್ತು ಅಫ್ಘಾನಿಸ್ತಾನದೊಂದಿಗಿನ ಸಂಬಂಧವನ್ನು ಬಲಪಡಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಭಾರತವು ಅಫ್ಘಾನಿಸ್ತಾನದ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಸ್ವಾತಂತ್ರ್ಯಕ್ಕೆ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಜೈಶಂಕರ್ ಹೇಳಿದರು.
ನಾಲ್ಕು ವರ್ಷಗಳ ಹಿಂದೆ ಮುಚ್ಚಿದ್ದ ರಾಯಭಾರಿ ಕಚೇರಿ
ಅಫ್ಘಾನಿಸ್ತಾನ ಸರ್ಕಾರದ ಜೊತೆಗಿನ ಸುದೀರ್ಘ ಹೋರಾಟದ ನಂತರ 2021ರಲ್ಲಿ ತಾಲಿಬಾನ್ ಸಂಘಟನೆ ಕಾಬೂಲ್ ಅನ್ನು ವಶಕ್ಕೆ ಪಡೆದ ನಂತರ ಭಾರತ ತನ್ನ ರಾಯಭಾರ ಕಚೇರಿ ಮತ್ತು ದೂತವಾಸಗಳನ್ನು ಮುಚ್ಚಲಾಗಿತ್ತು.