Tuesday, December 16, 2025

ಭಾರತೀಯ ಆತಿಥ್ಯವು ವಿಶ್ವದಲ್ಲೇ ಬೆಸ್ಟ್: ಬೆಂಗಳೂರಿನ ಟೀ ಸ್ಟಾಲ್ ಮಾಲೀಕನ ದೊಡ್ಡತನಕ್ಕೆ ವ್ಲಾಗರ್ ಫಿದಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತವು ಯಾವಾಗಲೂ ತನ್ನ ಅತಿಥಿ ಸತ್ಕಾರ ಮತ್ತು ‘ಅತಿಥಿ ದೇವೋ ಭವ’ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಇಲ್ಲಿಗೆ ಬರುವ ವಿದೇಶಿ ಪ್ರವಾಸಿಗರು ದೇಶದ ಸುಂದರ ತಾಣಗಳು ಮತ್ತು ವೈವಿಧ್ಯಮಯ ಆಹಾರಗಳ ಜೊತೆಗೆ, ಸ್ಥಳೀಯರ ಪ್ರೀತಿ ಮತ್ತು ದೊಡ್ಡತನಕ್ಕೆ ಮನಸೋಲುತ್ತಾರೆ. ಇಂತಹ ಒಂದು ಹೃದಯಸ್ಪರ್ಶಿ ಘಟನೆ ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿ ನಡೆದಿದ್ದು, ಅಮೆರಿಕಾದ ಪ್ರಜೆಯೊಬ್ಬರಿಗೆ ವಿಶಿಷ್ಟ ಅನುಭವ ನೀಡಿದೆ.

ಅಮೆರಿಕನ್ ವ್ಲಾಗರ್ ನಿಕ್ ಮೆಕ್‌ಕಚಿಯನ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಅನುಭವದ ವಿಡಿಯೋವನ್ನು ಹಂಚಿಕೊಂಡಿದ್ದು, ಸಣ್ಣ ಚಹಾ ಅಂಗಡಿಯ ಮಾಲೀಕರ ಆತಿಥ್ಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ನಿಕ್ ಅವರು ಸ್ಥಳೀಯರೊಂದಿಗೆ ಬೆರೆತು ಒಂದು ಚಿಕ್ಕ ಅಂಗಡಿಯಲ್ಲಿ ಚಹಾ ಕುಡಿದಿದ್ದಾರೆ. ಆದರೆ, ಬಿಲ್ ಪಾವತಿಸುವ ಸಂದರ್ಭದಲ್ಲಿ, ಅಂಗಡಿಯ ಮಾಲೀಕರು ಹಣ ಪಡೆಯಲು ನಿರಾಕರಿಸಿದ್ದಾರೆ.

ಈ ಅನಿರೀಕ್ಷಿತ ಪ್ರೀತಿಯಿಂದ ಸಂತೋಷಗೊಂಡಿರುವ ನಿಕ್, ವಿಡಿಯೋದಲ್ಲಿ “ನೀವು ತುಂಬಾ ದಯೆ ತೋರುತ್ತೀರಿ. ವಾಹ್! ಸ್ನೇಹಿತ ನನ್ನ ಚಹಾಕ್ಕೆ ಹಣ ನೀಡುತ್ತಿದ್ದಾನೆ. ಎಷ್ಟು ಚೆನ್ನಾಗಿದೆ ನಿಮ್ಮ ಆತಿಥ್ಯ. ಭಾರತೀಯ ಆತಿಥ್ಯವು ಪ್ರಪಂಚದ ಬೇರೆಲ್ಲಿಯೂ ಇಲ್ಲ” ಎಂದು ಬರೆದುಕೊಂಡಿದ್ದಾರೆ.

ಅಂಗಡಿ ಮಾಲೀಕನ ದೊಡ್ಡತನವನ್ನು ನಿಕ್ ಮೆಚ್ಚಿಕೊಂಡಿದ್ದು, ತಮ್ಮ ಭೇಟಿಯಿಂದ ಸ್ಥಳೀಯ ಜನರು ಸಂತೋಷಪಟ್ಟಿದ್ದನ್ನು ಕಂಡು ತಮಗೂ ಪರಮ ಸಂತೋಷವಾಯಿತು ಎಂದು ಹೇಳಿದ್ದಾರೆ.

ಸದ್ಯ ಈ ವಿಡಿಯೋ ಹದಿನೇಳು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಿದ್ದು, ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. “ನಮ್ಮ ದೇಶಕ್ಕೆ ಭೇಟಿ ಕೊಟ್ಟದ್ದಕ್ಕೆ ಧನ್ಯವಾದಗಳು,” ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ಇನ್ನೊಬ್ಬರು “ಇಂತಹ ಅತಿಥಿ ಸತ್ಕಾರ ಭಾರತದಲ್ಲಿ ಮಾತ್ರ ನೋಡಲು ಸಾಧ್ಯ” ಎಂದು ಕಾಮೆಂಟ್ ಮಾಡಿದ್ದಾರೆ. ಈ ಘಟನೆಯು ಭಾರತೀಯರು ಅತಿಥಿಗಳನ್ನು ತಮ್ಮವರೆಂದು ಭಾವಿಸಿ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಗೌರವಿಸುವ ಸಂಸ್ಕೃತಿಯನ್ನು ಎತ್ತಿ ಹಿಡಿದಿದೆ.

error: Content is protected !!