ಹೊಸ ದಿಗಂತ ಡಿಜಿಟಲ್ ಡೆಸ್ಕ್:
2029ರ ಒಳಗೆ ಭಾರತೀಯ ನೌಕಾಪಡೆಗೆ ರಫೇಲ್-ಎಂ ಫೈಟರ್ ಜೆಟ್‌ಗಳು ಸೇರ್ಪಡೆಯಾಗಲಿವೆ .
ಈ ಕುರಿತು ಖುದ್ದು ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಮಾಹಿತಿ ನೀಡಿದ್ದು, 2029ರ ಹೊತ್ತಿಗೆ ಭಾರತೀಯ ನೌಕಾಪಡೆಯು ತನ್ನ ವಿಮಾನವಾಹಕ ನೌಕೆಗಳಿಗಾಗಿ ನಾಲ್ಕು ರಫೇಲ್ ಎಂ ಫೈಟರ್ ಜೆಟ್‌ಗಳ ಮೊದಲ ಬ್ಯಾಚ್ ಅನ್ನು ಸ್ವೀಕರಿಸಲು ಪ್ರಾರಂಭಿಸಲಿದೆ ಎಂದು ತಿಳಿಸಿದ್ದಾರೆ.
ಭಾರತೀಯ ನೌಕಾಪಡೆಗೆ 26 ರಫೇಲ್-ಎಂ ಫೈಟರ್ ಜೆಟ್‌ಗಳನ್ನು ಖರೀದಿಸುವುದಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಈ ವರ್ಷದ ಏಪ್ರಿಲ್‌ನಲ್ಲಿ ಸಹಿ ಹಾಕಲಾಯಿತು, ಇದು ನೌಕಾಪಡೆಯೂ ತನ್ನ ಎರಡೂ ವಿಮಾನವಾಹಕ ನೌಕೆಗಳನ್ನು ಅವುಗಳ ಯುದ್ಧವಿಮಾನಗಳ ಪೂರ್ಣ ಪೂರಕದೊಂದಿಗೆ ನಿಯೋಜಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.
ನೌಕಾಪಡೆಯ ದಿನಾಚರಣೆಗೂ ಮುನ್ನ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅಡ್ಮಿರಲ್ ದಿನೇಶ್ ತ್ರಿಪಾಠಿ, 2029 ರ ವೇಳೆಗೆ ಭಾರತೀಯ ನೌಕಾಪಡೆಗೆ ನಾಲ್ಕು ರಫೇಲ್ ಯುದ್ಧ ವಿಮಾನಗಳ ಮೊದಲ ಸೆಟ್ ಸಿಗುವ ನಿರೀಕ್ಷೆಯಿದೆ ಎಂದರು.
ಕಳೆದ ಏಪ್ರಿಲ್ 28 ರಂದು ಭಾರತ ಮತ್ತು ಫ್ರಾನ್ಸ್ ದೇಶಗಳು ಭಾರತೀಯ ನೌಕಾಪಡೆಗಾಗಿ 26 ರಫೇಲ್-ಮೆರೈನ್ ಜೆಟ್‌ಗಳನ್ನು ಅವುಗಳಲ್ಲಿ 22 ಸಿಂಗಲ್ ಸೀಟರ್‌ಗಳು ಹಾಗೂ 4 ಎರಡು ಸೀಟುಗಳ ಫೈಟರ್ ಜೆಟ್‌ಗಳನ್ನು ಖರೀದಿಸಲು ಅಂತರ್ ಸರ್ಕಾರಿ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಒಪ್ಪಂದವು ತರಬೇತಿಯನ್ನು ಕೂಡ ಒಳಗೊಂಡಿದೆ. ಸುಮಾರು 64,000 ಕೋಟಿ ರೂ. ವೆಚ್ಚದಲ್ಲಿ ಐದು ವರ್ಷಗಳ ಅವಧಿಗೆ ತರಬೇತಿ, ಸಿಮ್ಯುಲೇಟರ್, ಸಂಬಂಧಿತ ಉಪಕರಣಗಳು, ಶಸ್ತ್ರಾಸ್ತ್ರಗಳು ಮತ್ತು ಕಾರ್ಯಕ್ಷಮತೆ ಆಧಾರಿತ ಲಾಜಿಸ್ಟಿಕ್ಸ್ (ಪಿಬಿಎಲ್) ಅನ್ನು ಈ ಒಪ್ಪಂದ ಒಳಗೊಂಡಿದೆ. ಈ ಫ್ರಾನ್ಸ್ ನಿರ್ಮಿತ ರಫೇಲ್-ಎಂ ಫೈಟರ್ ಜೆಟ್‌ಗಳು, ಐಎನ್ಎಸ್ ವಿಕ್ರಮಾದಿತ್ಯ ಮತ್ತು ಐಎನ್ಎಸ್ ವಿಕ್ರಾಂತ್ ಈ ಎರಡೂ ಯುದ್ಧ ನೌಕೆಗಳಿಂದ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ವರದಿಯಾಗಿದೆ.

