ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ರೈಲ್ವೆಯು ಹೊಸ ಸೌಕರ್ಯವನ್ನು ಪರಿಚಯಿಸುತ್ತಿದ್ದು, ಎಸಿ ಕೋಚ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ರಾಜಸ್ಥಾನದ ಪರಂಪರೆಯ ಸಂಗನೆರಿ ಮುದ್ರಣ ಹೊಂದಿರುವ ಹೊಸ ಬ್ಲಾಂಕೇಟ್‌ಗಳನ್ನು ನೀಡಲು ಮುಂದಾಗಿದೆ.
ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಯಪುರದ ಖಾತಿಪುರಾ ರೈಲ್ವೆ ನಿಲ್ದಾಣದಲ್ಲಿ ಆರಂಭಿಸಲಾಗಿದೆ. ಕೆಲ ಆಯ್ದ ರೈಲುಗಳಲ್ಲಿ ಇದನ್ನು ಪರೀಕ್ಷಿಸಿದ ಬಳಿಕ, ದೇಶಾದ್ಯಂತ ಈ ಯೋಜನೆಯನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ.
ಹಿಂದಿನ ಬಿಳಿ ಬ್ಲಾಂಕೆಟ್‌ಗಳ ಅಸ್ವಚ್ಛತೆಯ ಬಗ್ಗೆ ಪ್ರಯಾಣಿಕರಿಂದ ದೂರುಗಳು ಬಂದ ಹಿನ್ನೆಲೆ ಈ ಹೊಸ ಸೌಲಭ್ಯ ಕೈಗೊಳ್ಳಲಾಗಿದೆ. ಮೊದಲ ದಿನವೇ, ಜಯಪುರ–ಅಹಮದಾಬಾದ್ (ಅಸರ್ವಾ) ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರಿಗೆ ಈ ಹೊಸ ಸಂಗನೆರಿ ಮುದ್ರಣ ಹೊಂದಿರುವ ಕವರ್‌ಗಳನ್ನು ನೀಡಲಾಗಿದೆ.
ಈ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ತೊಳೆಯಬಹುದಾದ ಈ ಹೊಸ ಬ್ಲಾಂಕೆಟ್‌ಗಳು, ದೀರ್ಘಕಾಲಿಕವಾಗಿ ಬಳಕೆ ಮಾಡಬಹುದಾಗಿದೆ ಮತ್ತು ನಿರ್ವಹಣೆಯೂ ಸುಲಭ. ನಮ್ಮ ಮನೆಯಲ್ಲಿ ಹೇಗೆ ಕವರ್ ಹಾಕಿದ ಬ್ಲಾಂಕೆಟ್‌ಗಳನ್ನು ಬಳಸುತ್ತೇವೋ, ಅದೇ ಅನುಭವ ರೈಲ್ವೆ ಪ್ರಯಾಣಿಕರಿಗೆ ಲಭ್ಯವಾಗಲಿದೆ ಎಂದರು.
ಈ ಯೋಜನೆಯು ಕೇವಲ ಪ್ರಯಾಣಿಕರ ಕಂಫರ್ಟ್‌ಗಾಗಿ ಮಾತ್ರವಲ್ಲದೇ, ಭಾರತೀಯ ಕರಕುಶಲತೆ ಮತ್ತು ಜವಳಿ ಪರಂಪರೆಗೂ ಪ್ರೋತ್ಸಾಹ ನೀಡುವ ಉದ್ದೇಶ ಹೊಂದಿದೆ. ಇದು ಯಶಸ್ವಿಯಾದರೆ ರಾಷ್ಟ್ರವ್ಯಾಪಿ ಈ ಯೋಜನೆಯನ್ನು ವಿಸ್ತರಿಸಲಾಗುವುದು ಮತ್ತು ಬೇರೆ ರಾಜ್ಯಗಳ ಸಾಂಪ್ರದಾಯಿಕ ಮುದ್ರಣಗಳನ್ನು ಕೂಡ ರೈಲ್ವೆಯಲ್ಲಿ ಅನಾವರಣಗೊಳಿಸುವ ಉದ್ದೇಶ ಇದೆ ಎಂದು ತಿಳಿಸಿದ್ದಾರೆ.
ಈ ಹೊಸ ಉಪ್ರಕಮಕ್ಕೆ ಹಲವು ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ರೈಲ್ವೆಯ ಈ ಹೊಸ ಬದಲಾವಣೆಯು ಹೆಚ್ಚು ಆರಾಮದಾಯಕವಾಗಿದೆ ಎಂದಿದ್ದಾರೆ.