January21, 2026
Wednesday, January 21, 2026
spot_img

ಅಮೆರಿಕದಲ್ಲಿ ಭಾರತೀಯ ಟ್ರಕ್ ಚಾಲಕರಿಗೆ ಸಂಕಷ್ಟ: 7,000ಕ್ಕೂ ಹೆಚ್ಚು ಡ್ರೈವರ್ಸ್ ಸೇವೆಯಿಂದ ವಜಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕಾದ ಸಾರಿಗೆ ಇಲಾಖೆಯ ಹೊಸ ನಿಯಮದಿಂದ ಸಾವಿರಾರು ಟ್ರಕ್ ಚಾಲಕರ ಜೀವನ ಸಂಕಷ್ಟದಲ್ಲಿದೆ. ಇಂಗ್ಲಿಷ್ ಭಾಷಾ ಪ್ರಾವೀಣ್ಯತೆ (ELP) ಪರೀಕ್ಷೆಯಲ್ಲಿ ವಿಫಲರಾಗಿರುವ ಕಾರಣಕ್ಕೆ 7,000ಕ್ಕೂ ಹೆಚ್ಚು ವಾಣಿಜ್ಯ ಟ್ರಕ್ ಚಾಲಕರನ್ನು ಸೇವೆಯಿಂದ ನಿಷೇಧಿಸಲಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದಡಿಯಲ್ಲಿ ಜಾರಿಗೊಂಡ ಈ ಕಠಿಣ ನಿಯಮವು ವಿಶೇಷವಾಗಿ ಭಾರತೀಯ ಮೂಲದ ಚಾಲಕರಿಗೆ ತೀವ್ರ ಆಘಾತ ತಂದಿದೆ.

ಅಮೆರಿಕಾದ ಸಾರಿಗೆ ಕಾರ್ಯದರ್ಶಿ ಸೀನ್ ಡಫಿ ಅವರು ನೀಡಿದ ಮಾಹಿತಿಯ ಪ್ರಕಾರ, ಅಕ್ಟೋಬರ್ 2025ರ ವೇಳೆಗೆ ಒಟ್ಟು 7,248 ಚಾಲಕರು ಇಂಗ್ಲಿಷ್ ಭಾಷಾ ಪ್ರಾವೀಣ್ಯತೆಯ ಮಾನದಂಡಗಳನ್ನು ಪೂರೈಸದ ಕಾರಣದಿಂದ ಅಮಾನತುಗೊಂಡಿದ್ದಾರೆ. “ರಸ್ತೆ ಸುರಕ್ಷತೆಗಾಗಿ ಟ್ರಕ್ ಚಾಲಕರು ಇಂಗ್ಲಿಷ್ ಮಾತನಾಡಿ, ಸಂಚಾರ ಸೂಚನೆಗಳನ್ನು ಅರ್ಥಮಾಡಿಕೊಳ್ಳಬೇಕು. ಇಲ್ಲದಿದ್ದರೆ ಸೇವೆಯಿಂದ ಹೊರಗುಳಿಯುವುದು ಅನಿವಾರ್ಯ,” ಎಂದು ಡಫಿ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.

ಈ ವರ್ಷದ ಮಾರ್ಚ್‌ನಲ್ಲಿ ಟ್ರಂಪ್ ಅವರು ಇಂಗ್ಲಿಷ್‌ನ್ನು ಅಮೆರಿಕಾದ ಅಧಿಕೃತ ರಾಷ್ಟ್ರೀಯ ಭಾಷೆ ಎಂದು ಘೋಷಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದರು. ಅದರಡಿ ಎಲ್ಲಾ ವೃತ್ತಿಪರ ಚಾಲಕರಿಗೆ ಇಂಗ್ಲಿಷ್ ಪ್ರಾವೀಣ್ಯತೆ ಕಡ್ಡಾಯಗೊಂಡಿದೆ. ಚಾಲಕರು ಸಂಚಾರ ಸಂಕೇತಗಳನ್ನು ಓದಲು, ಸುರಕ್ಷತಾ ಅಧಿಕಾರಿಗಳ ಜೊತೆ ಸಂವಹನ ನಡೆಸಲು ಹಾಗೂ ಗಡಿ ತಪಾಸಣೆ ಕೇಂದ್ರಗಳಲ್ಲಿ ಸಮರ್ಪಕವಾಗಿ ಉತ್ತರಿಸಲು ಸಮರ್ಥರಾಗಿರಬೇಕು ಎಂಬುದು ನಿಯಮದ ಅಂಶವಾಗಿದೆ.

ನಿಯಮ ಜಾರಿಯಾದ ನಂತರ ಮೇ ತಿಂಗಳಲ್ಲಿ ಡಫಿ ಅವರು ಫೆಡರಲ್ ಮೋಟಾರ್ ಕ್ಯಾರಿಯರ್ ಸೇಫ್ಟಿ ಅಡ್ಮಿನಿಸ್ಟ್ರೇಶನ್ (FMCSA) ಮುಖಾಂತರ ರಾಷ್ಟ್ರವ್ಯಾಪಿ ಇಂಗ್ಲಿಷ್ ಪರೀಕ್ಷಾ ಅಭಿಯಾನವನ್ನು ಪ್ರಾರಂಭಿಸಿದರು. ಇದರ ಪರಿಣಾಮವಾಗಿ ಚಾಲಕರ ಅಮಾನತು ಸಂಖ್ಯೆ ಕೆಲವು ತಿಂಗಳಲ್ಲಿ 1,500ರಿಂದ 7,000 ದಾಟಿದೆ.

Must Read