ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಮಹಿಳಾ ತಂಡ, ಟಿ20 ಸರಣಿ ಗೆದ್ದ ಹುಮ್ಮಸ್ಸಿನಲ್ಲಿ ಏಕದಿನ ಸರಣಿಯನ್ನು ಕಳೆದುಕೊಂಡಿದೆ.
ಹೋಬಾರ್ಟ್‌ನಲ್ಲಿ ನಡೆದ ಸರಣಿಯ ಎರಡನೇ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದುಕೊಂಡ ಆತಿಥೇಯ ಆಸ್ಟ್ರೇಲಿಯಾ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿದೆ.
ಆಸ್ಟ್ರೇಲಿಯಾ ವಿರುದ್ಧ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 251 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಇನ್ನು 8 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್‌ಗಳಿಂದ ಈ ಪಂದ್ಯವನ್ನೂ ಗೆದ್ದುಕೊಂಡಿತು.
ಸ್ಮೃತಿ ಮಂಧಾನ (31) ಮತ್ತು ಪ್ರತಿಕಾ ರಾವಲ್ (52) ಮೊದಲ ವಿಕೆಟ್ಗೆ 78 ರನ್‌ಗಳನ್ನು ಸೇರಿಸುವ ಮೂಲಕ ಉತ್ತಮ ಆರಂಭವನ್ನು ನೀಡಿದರು. ಪ್ರತಿಕಾ ಕೂಡ ಅರ್ಧಶತಕ ಪೂರೈಸಿದರು. ಆದರೆ ತಂಡದ ಮೊತ್ತ 100 ರನ್ ದಾಟುವ ಮುನ್ನವೇ ಮೂರು ವಿಕೆಟ್‌ಗಳು ಪತನಗೊಂಡವು. ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಕಾಶ್ವಿ ಗೌತಮ್ (25) 55 ರನ್‌ಗಳ ಜೊತೆಯಾಟ ನಡೆಸಿ ತಂಡವನ್ನು 251 ರನ್‌ಗಳಿಗೆ ಕೊಂಡೊಯ್ದರು.
ಈ ಗುರಿ ಬೆನ್ನಟ್ಟಿದ ಆಸೀಸ್ಗೆ ಆರಂಭಿಕ ಆಘಾತ ಎದುರಾಯಿತು. ನಾಯಕಿ ಅಲಿಸಾ ಹೀಲಿ (6) ಬೇಗನೆ ಔಟಾದರು, ಆದರೆ ಫೋಬೆ ಲಿಚ್‌ಫೀಲ್ಡ್ (80 ರನ್‌ಗಳು, 62 ಎಸೆತಗಳು) ಮತ್ತು ಜಾರ್ಜಿಯಾ ವಾಲ್ 119 ರನ್‌ಗಳ ಜೊತೆಯಾಟ ನಡೆಸಿ, ಗೆಲುವಿನತ್ತ ತಂಡವನ್ನು ಕೊಂಡೊಯ್ದರು.
ಲಿಚ್‌ಫೀಲ್ಡ್ ಶತಕವನ್ನು ತಪ್ಪಿಸಿಕೊಂಡರಾದರೂ ವಾಲ್ (101 ರನ್‌ಗಳು, 82 ಎಸೆತಗಳು) ಕೇವಲ 80 ಎಸೆತಗಳಲ್ಲಿ ಅದ್ಭುತ ಶತಕ ಬಾರಿಸುವ ಮೂಲಕ ತಂಡದ ಗೆಲುವನ್ನು ಖಚಿತಪಡಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ ಕೇವಲ 36.1 ಓವರ್‌ಗಳಲ್ಲಿ ಪಂದ್ಯ ಮತ್ತು ಸರಣಿಯನ್ನು ಐದು ವಿಕೆಟ್‌ಗಳಿಂದ ಗೆದ್ದುಕೊಂಡಿತು. ಇದೀಗ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯ ಮಾರ್ಚ್ 1 ರಂದು ಹೋಬಾರ್ಟ್‌ನಲ್ಲಿ ನಡೆಯಲಿದೆ.



