ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಎಂದು ಪರಿಗಣಿಸಲ್ಪಟ್ಟಿರುವ ಭಾರತದ ಮೊದಲ 32-ಬಿಟ್ ಮೈಕ್ರೋಪ್ರೊಸೆಸರ್ ವಿಕ್ರಮ್ ಅನ್ನು ದೆಹಲಿಯಲ್ಲಿ ನಡೆದ ಸೆಮಿಕಾನ್ ಇಂಡಿಯಾ 2025 ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಅನಾವರಣಗೊಳಿಸಲಾಯಿತು. ಇಸ್ರೋ ಅಭಿವೃದ್ಧಿಪಡಿಸಿದ ಈ ಪ್ರೊಸೆಸರ್ ವಿಶೇಷವಾಗಿ ಬಾಹ್ಯಾಕಾಶ ಉಡಾವಣಾ ವಾಹನಗಳಿಗೆ ವಿನ್ಯಾಸಗೊಳಿಸಲ್ಪಟ್ಟಿದ್ದು, ಚಿಪ್‌ಗಳ ಆಮದು ಅವಲಂಬನೆಯನ್ನು ಕಡಿಮೆ ಮಾಡುವಲ್ಲಿ ಮಹತ್ತರ ಹೆಜ್ಜೆಯಾಗಲಿದೆ.
ಕಾರ್ಯಕ್ರಮದಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ‘ವಿಕ್ರಮ್’ ಚಿಪ್ ಹಾಗೂ ನಾಲ್ಕು ಅನುಮೋದಿತ ಯೋಜನೆಗಳ ಪರೀಕ್ಷಾ ಚಿಪ್‌ಗಳನ್ನು ಪ್ರಧಾನಿ ನರೇಂದ್ರ ಮೋದಿಗೆ ಹಸ್ತಾಂತರಿಸಿದರು. ಈ ವೇಳೆ ಮಾತನಾಡಿದ ಅವರು, “ಭಾರತದ ಸೆಮಿಕಂಡಕ್ಟರ್ ಮಿಷನ್ ಆರಂಭಿಸಿದ ಕೇವಲ ಮೂರೂವರೆ ವರ್ಷಗಳಲ್ಲಿ ಜಗತ್ತಿನ ಗಮನ ಸೆಳೆಯಲು ನಮಗೆ ಸಾಧ್ಯವಾಗಿದೆ. ಈಗಾಗಲೇ ಐದು ಸೆಮಿಕಂಡಕ್ಟರ್ ಘಟಕಗಳ ನಿರ್ಮಾಣ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಒಂದರ ಪೈಲಟ್ ಲೈನ್ ಪೂರ್ಣಗೊಂಡಿದೆ. ಮುಂದಿನ ತಿಂಗಳುಗಳಲ್ಲಿ ಇನ್ನೆರಡು ಘಟಕಗಳು ಉತ್ಪಾದನೆ ಆರಂಭಿಸಲಿವೆ” ಎಂದು ತಿಳಿಸಿದರು.
ವಿಕ್ರಮ್ ಪ್ರೊಸೆಸರ್ ಬಾಹ್ಯಾಕಾಶ ಉಡಾವಣಾ ವಾಹನಗಳಲ್ಲಿ ಉಂಟಾಗುವ ಕಠಿಣ ಪರಿಸರ ಪರಿಸ್ಥಿತಿಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಇದು ಭಾರತದ ತಂತ್ರಜ್ಞಾನ ಸ್ವಾವಲಂಬನೆಯತ್ತ ಪ್ರಮುಖ ಹೆಜ್ಜೆಯಾಗುತ್ತದೆ ಎಂದು ಸಚಿವರು ತಿಳಿಸಿದರು.
ಬಾಸ್ಟನ್ ರಿಸರ್ಚ್ ವರದಿ ಪ್ರಕಾರ, ಜಾಗತಿಕ ಚಿಪ್ ವಿನ್ಯಾಸ ಎಂಜಿನಿಯರ್‌ಗಳಲ್ಲಿ ಶೇ.20ರಷ್ಟು ಮಂದಿ ಭಾರತದಲ್ಲಿದ್ದಾರೆ. ಇದರಿಂದ ಭಾರತವು ಜಾಗತಿಕ ಸೆಮಿಕಂಡಕ್ಟರ್ ವಿನ್ಯಾಸದಲ್ಲಿ ನಿರ್ಣಾಯಕ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಕ್ವಾಲ್ಕಾಮ್, ಇಂಟೆಲ್, ಎನ್ವಿಡಿಯಾ, ಬ್ರಾಡ್‌ಕಾಮ್, ಮೀಡಿಯಾಟೆಕ್ ಮುಂತಾದ ಜಾಗತಿಕ ತಂತ್ರಜ್ಞಾನ ದೈತ್ಯಗಳು ಈಗಾಗಲೇ ಬೆಂಗಳೂರು, ಹೈದರಾಬಾದ್ ಹಾಗೂ ನೋಯ್ಡಾದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಿದ್ದು, ಭಾರತದ ಪಾತ್ರವನ್ನು ಮತ್ತಷ್ಟು ಬಲಪಡಿಸಿದೆ.