ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾದ ಬಹು ನಿರೀಕ್ಷಿತ ಬುಲೆಟ್ ರೈಲು ಯಾವಾಗ ಸಂಚಾರ ಆರಂಭಿಸಲಿದೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್ ರೈಲಿನ ಮೊದಲ ಹಂತದ ಸಂಚಾರ 2027ರ ಡಿಸೆಂಬರ್‌ನಲ್ಲಿ ಆರಂಭವಾಗಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿದ್ದಾರೆ.
ಮುಂಬೈ ಬಳಿಯ ಥಾಣೆಯಲ್ಲಿ ನಿರ್ಮಾಣದ ಕೊನೆಯ ಹಂತದಲ್ಲಿರುವ 5 ಕಿ.ಮೀ ಉದ್ದದ ಸುರಂಗದ ಪ್ರಗತಿಯನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಶನಿವಾರ ಪರಿಶೀಲಿಸಿದರು . ಇದೇ ವೇಳೆ, ಸುರಂಗದ ಕೊನೆಯ ಹಂತದ ಕಾಮಗಾರಿಗೆ ನೆರವಿನ ಹಸ್ತ ನೀಡಿದರು.

ಈ ವೇಳೆ ಸುರಂಗದ ಒಂದು ಭಾಗದಲ್ಲಿ ನಿಂತ ರೈಲ್ವೆ ಸಚಿವರು ಗುಂಡಿಯನ್ನು ಒತ್ತುವ ಮೂಲಕ ಡೈನಮೈಟ್ ಸ್ಫೋಟಿಸಿದರು. ಈ ಮೂಲಕ ಅಂತಿಮ ಪದರವನ್ನು ಭೇದಿಸುವ ಐದು ಕಿ.ಮೀ. ಉದ್ದದ ಸುರಂಗ ಕಾಮಗಾರಿಗೆ ಅಂತಿಮ ಸ್ಪರ್ಶ ನೀಡಿದರು.
ಇದನ್ನು “ಐತಿಹಾಸಿಕ ಸಾಧನೆ” ಎಂದು ಕರೆದ ವೈಷ್ಣವ್ ಅವರು, ಸುರಂಗ ಮಾರ್ಗದ ಮುಕ್ತಾಯಕ್ಕೆ ಚಾಲನೆ ನೀಡಿ, ಸೂರತ್-ಬಿಲಿಮೋರಾ ವಿಭಾಗದಲ್ಲಿನ ಹೈಸ್ಪೀಡ್ ಕಾರಿಡಾರ್‌ನ ಮೊದಲ ಹಂತವು 2027ರ ಡಿಸೆಂಬರ್‌ನಲ್ಲಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಬುಲೆಟ್ ರೈಲು “ಮಧ್ಯಮ ವರ್ಗದವರಿಗೆ ಸಾರಿಗೆ” ಆಗಲಿದೆ ಮತ್ತು ಇದರ ಪ್ರಯಾಣ ದರ ಮಿತವಾಗಿರಲಿದೆ ಎಂದು ತಿಳಿಸಿದರು. ಗೂಗಲ್ ಮ್ಯಾಪ್ಸ್ ಅಪ್ಲಿಕೇಶನ್ ಮುಂಬೈ ಮತ್ತು ಅಹಮದಾಬಾದ್ ನಡುವಿನ ಪ್ರಯಾಣದ ಸಮಯವನ್ನು ಒಂಬತ್ತು ಗಂಟೆ ಎಂದು ತೋರಿಸುತ್ತದೆ. ಆದರೆ ಬುಲೆಟ್ ರೈಲಿನಲ್ಲಿ ಜನರು ಎರಡು ಗಂಟೆ ಮತ್ತು ಏಳು ನಿಮಿಷಗಳಲ್ಲಿ ದೂರವನ್ನು ಕ್ರಮಿಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.
2027ರ ಡಿಸೆಂಬರ್‌ನಲ್ಲಿ ರೈಲು ಸಂಚಾರ ಆರಂಭ
ಬುಲೆಟ್ ರೈಲು ಯೋಜನೆಯ ಮೊದಲ ಹಂತವನ್ನು ಮೊದಲು 2027ರಲ್ಲಿ ಸೂರತ್-ಬಿಲಿಮೋರಾ ವಿಭಾಗದಲ್ಲಿ, ನಂತರ 2028ರಲ್ಲಿ ಥಾಣೆ ಮತ್ತು 2029ರಲ್ಲಿ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಪ್ರಾರಂಭಿಸಲಾಗುವುದು ಎಂದು ವೈಷ್ಣವ್ ಹೇಳಿದರು.
ಬೆಳಗ್ಗೆ ಮತ್ತು ಸಂಜೆಯ ಗರಿಷ್ಠ ಸಮಯದಲ್ಲಿ ಪ್ರತಿ ಅರ್ಧ ಗಂಟೆಗೊಮ್ಮೆ ರೈಲು ಹೊರಡುತ್ತದೆ. ಒಮ್ಮೆ ಸಂಪೂರ್ಣ ನೆಟ್‌ವರ್ಕ್ ಸ್ಥಿರಗೊಂಡ ನಂತರ, ಗರಿಷ್ಠ ಸಮಯದಲ್ಲಿ ಪ್ರತಿ 10 ನಿಮಿಷಕ್ಕೊಮ್ಮೆ ರೈಲು ಇರಲಿದೆ ಎಂದು ಅವರು ತಿಳಿಸಿದರು.
ಡೈನಮೈಟ್‌ಗಳ ಸ್ಫೋಟದ ಪರಿಣಾಮವಾಗಿ ಐದು ಕಿ.ಮೀ. ಉತ್ಖನನ ಪೂರ್ಣಗೊಂಡಿತು. ನ್ಯೂ ಆಸ್ಟ್ರಿಯನ್ ಟನೆಲ್ ಮೆಥಡ್ ಬಳಸಿ ಉತ್ಖನನಗೊಂಡ ಈ ಸುರಂಗವು, ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಮತ್ತು ಶಿಲ್ಪತಾ ನಡುವಿನ 21 ಕಿ.ಮೀ. ಉದ್ದದ ಭೂಗತ ಮಾರ್ಗದ ಒಂದು ಭಾಗವಾಗಿದೆ. ಇದರಲ್ಲಿ ಥಾಣೆ ಕ್ರೀಕ್ ಕೆಳಗಿನ 7 ಕಿ.ಮೀ. ವಿಭಾಗವೂ ಸೇರಿದೆ ಎಂದು ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ ತಿಳಿಸಿದೆ.