ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸತತ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ತಂಡ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಈ ಅಮೋಘ ಗೆಲುವಿನೊಂದಿಗೆ ಟೀಮ್ ಇಂಡಿಯಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮಹತ್ತರ ಮೈಲಿಗಲ್ಲೊಂದನ್ನು ಸ್ಥಾಪಿಸಿದೆ. ಅಷ್ಟೇ ಅಲ್ಲದೆ, ಈ ಹಿಂದೆ ಪಾಕಿಸ್ತಾನ ತಂಡದ ಹೆಸರಿನಲ್ಲಿದ್ದ ಅತ್ಯಪೂರ್ವ ವಿಶ್ವದಾಖಲೆಯೊಂದನ್ನು ಭಾರತ ಈಗ ಸರಿಗಟ್ಟಿದೆ.
ಟಿ20 ಕ್ರಿಕೆಟ್ ಇತಿಹಾಸದಲ್ಲಿ ಸತತವಾಗಿ ಅತಿ ಹೆಚ್ಚು ಸರಣಿಗಳನ್ನು ಗೆದ್ದ ದಾಖಲೆ ಪಾಕಿಸ್ತಾನದ ಹೆಸರಿನಲ್ಲಿತ್ತು. 2016 ರಿಂದ 2018ರ ಅವಧಿಯಲ್ಲಿ ಪಾಕ್ ತಂಡ ಸತತವಾಗಿ 11 ಸರಣಿಗಳನ್ನು ಗೆದ್ದು ಬೀಗಿತ್ತು. ಇದೀಗ ನ್ಯೂಜಿಲೆಂಡ್ ವಿರುದ್ಧದ ಸರಣಿ ಗೆಲುವಿನೊಂದಿಗೆ ಭಾರತ ಕೂಡ ಸತತ 11ನೇ ಸರಣಿ ಜಯದೊಂದಿಗೆ ಪಾಕಿಸ್ತಾನದ ಈ ದಾಖಲೆಯನ್ನು ಸರಿಗಟ್ಟಿದೆ.
ಭಾರತ ತಂಡವು ಕೊನೆಯ ಬಾರಿಗೆ ಟಿ20 ಸರಣಿಯನ್ನು ಸೋತಿದ್ದು 2023ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ. ಆ ಸೋಲಿನ ಬಳಿಕ ಪುಟಿದೆದ್ದ ಟೀಮ್ ಇಂಡಿಯಾ, ಎದುರಾದ ಪ್ರತಿಯೊಂದು ತಂಡವನ್ನೂ ಮಣಿಸುತ್ತಾ ಸತತ ಗೆಲುವಿನ ನಾಗಾಲೋಟ ಮುಂದುವರೆಸಿದೆ.
ಸದ್ಯಕ್ಕೆ ಪಾಕಿಸ್ತಾನದ ಜೊತೆ ಜಂಟಿಯಾಗಿ ಅಗ್ರಸ್ಥಾನ ಹಂಚಿಕೊಂಡಿರುವ ಭಾರತಕ್ಕೆ ಜುಲೈನಲ್ಲಿ ದೊಡ್ಡ ಅವಕಾಶವೊಂದಿದೆ. ಜುಲೈನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು ಭಾರತ ಕೈವಶ ಮಾಡಿಕೊಂಡರೆ, ಸತತ 12 ಸರಣಿ ಗೆದ್ದ ಏಕೈಕ ತಂಡವಾಗಿ ವಿಶ್ವದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಳ್ಳಲಿದೆ.




