ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಮತ್ತು ಜಾರ್ಜಿಯಾದಲ್ಲಿದ್ದ ಭಾರತದ ಇಬ್ಬರು ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್‌ಗಳನ್ನು ಭಾರತೀಯ ಭದ್ರತಾ ಸಂಸ್ಥೆಗಳು ಬಂಧಿಸಿವೆ. ಬಂಧಿತರಾದ ವೆಂಕಟೇಶ್ ಗಾರ್ಗ್ ಮತ್ತು ಭಾನು ರಾಣಾ ವಿರುದ್ಧ ಭಾರತದಲ್ಲಿ ಅನೇಕ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಇವರಲ್ಲಿ ರಾಣಾ ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೊತೆ ನೇರ ಸಂಪರ್ಕ ಹೊಂದಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಹರಿಯಾಣ ಪೊಲೀಸರ ಸಹಯೋಗದೊಂದಿಗೆ ವೆಂಕಟೇಶ್ ಗಾರ್ಗ್‌ನ್ನು ಜಾರ್ಜಿಯಾದಲ್ಲಿ ಬಂಧಿಸಲಾಗಿದೆ. ಗಾರ್ಗ್ ಬಿಎಸ್‌ಪಿ ನಾಯಕನ ಹತ್ಯೆಯಲ್ಲಿ ಭಾಗಿಯಾಗಿದ್ದು, ಹರಿಯಾಣದ ನಾರಾಯಣಗಢ ಮೂಲದವನು. ಈತ ತನ್ನ ಸುಲಿಗೆ ಗ್ಯಾಂಗ್‌ಗೆ ಉತ್ತರ ಭಾರತದ ಹಲವು ರಾಜ್ಯಗಳಿಂದ ಯುವಕರನ್ನು ಸೇರಿಸಿಕೊಳ್ಳುತ್ತಿದ್ದ. ಜೊತೆಗೆ ವಿದೇಶದಲ್ಲಿ ವಾಸಿಸುತ್ತಿರುವ ಕಪಿಲ್ ಸಾಂಗ್ವಾನ್ ಜೊತೆಗೂ ಸೇರಿ ಕ್ರೈಂ ನೆಟ್‌ವರ್ಕ್ ನಿರ್ಮಿಸಿದ್ದಾನೆ. ಕಳೆದ ಅಕ್ಟೋಬರ್‌ನಲ್ಲಿ ದೆಹಲಿ ಪೊಲೀಸರು ಸಂಗ್ವಾನ್ ತಂಡದ ನಾಲ್ವರು ಶೂಟರ್‌ಗಳನ್ನು ಬಂಧಿಸಿದ್ದರು.
ಇದಕ್ಕೆ ಜೊತೆಯಾಗಿ, ಅಮೆರಿಕದಲ್ಲಿ ವಾಸಿಸುತ್ತಿದ್ದ ಭಾನು ರಾಣಾ ಪಂಜಾಬ್, ಹರಿಯಾಣ ಹಾಗೂ ದೆಹಲಿಯಲ್ಲಿ ಸಕ್ರಿಯ ಅಪರಾಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಪಂಜಾಬ್‌ನಲ್ಲಿ ನಡೆದ ಗ್ರೆನೇಡ್ ದಾಳಿಯ ತನಿಖೆಯಲ್ಲೂ ಅವನ ಹೆಸರು ಹೊರಬಂದಿತ್ತು. ಈ ವರ್ಷದ ಜೂನ್‌ನಲ್ಲಿ ಕರ್ನಾಲ್‌ನ ವಿಶೇಷ ಕಾರ್ಯಪಡೆ ರಾಣಾ ನಿರ್ದೇಶನದಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಇಬ್ಬರನ್ನು ಬಂಧಿಸಿತ್ತು. ಈಗ ಈ ಇಬ್ಬರ ಬಂಧನದಿಂದ ಬಿಷ್ಣೋಯ್ ಗ್ಯಾಂಗ್‌ನ ಅಂತಾರಾಷ್ಟ್ರೀಯ ಸಂಪರ್ಕಗಳ ಕುರಿತು ಹೆಚ್ಚಿನ ಮಾಹಿತಿಗಳು ಬಹಿರಂಗವಾಗುವ ನಿರೀಕ್ಷೆಯಿದೆ.

