Tuesday, September 30, 2025

ಭಾರತಕ್ಕೆ ಗೆಲುವಿನ ‘ತಿಲಕ’: ಪಾಕ್ ಬಗ್ಗು ಬಡಿದು ಏಷ್ಯಾಕಪ್ ಟ್ರೋಫಿ ಗೆದ್ದ ಸೂರ್ಯ ಪಡೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಬಗ್ಗು ಬಡಿದ ಭಾರತ ಏಷ್ಯಾಕಪ್ ಟ್ರೋಫಿ ಗೆದ್ದುಕೊಂಡಿತು.

ಭಾರತ ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲಿಕಿತ್ತು. ಅಭಿಶೇಕ್ ಶರ್ಮಾ ಕೇವಲ 5 ರನ್, ನಾಯಕ ಸೂರ್ಯಕುಮಾರ್ ಯಾದವ್ 1, ಶುಬಮನ್ ಗಿಲ್ 12 ರನ್ ಸಿಡಿಸಿ ಔಟಾಗಿದ್ದರು.

ತಿಲಕ್ ವರ್ಮಾ ಹಾಗೂ ಸಂಜು ಸ್ಯಾಮ್ಸನ್ ಜೊತೆಯಾಟ ಭಾರತ ತಂಡಕ್ಕೆ ಉಸಿರಾಟ ನೀಡಿತ್ತು. ಆದರೆ ಸಂಜು ಆಟ 24 ರನ್‌ಗೆ ಅಂತ್ಯವಾಗುವ ಮೂಲಕ ಆತಂಕ ಹೆಚ್ಚಾಗಿತ್ತು,

ತಿಲಕ್ ವರ್ಮಾ ಹೋರಾಟ ಟೀಂ ಇಂಡಿಯಾಗೆ ನೆರವಾಗಿತ್ತು. ಎಚ್ಚರಿಕೆ ಆಟವಾಡಿದ ತಿಲಕ್ ವರ್ಮಾ ಹಾಫ್ ಸೆಂಚುರಿ ಸಿಡಿಸಿದರು.

18ನೇ ಓವರ್‌ನ ಅಂತಿಮ ಎಸೆತದಲ್ಲಿ ಶಿವಂ ದುಬೆ ಸಿಕ್ಸರ್ ಸಿಡಿಸಿ ಪಂದ್ಯಕ್ಕೆ ತಿರುವು ನೀಡಿದರು. ಈ ಸಿಕ್ಸರ್ ಪಾಕಿಸ್ತಾನದ ಮೇಲೆ ಒತ್ತಡ ಹೆಚ್ಚಿಸುವಂತೆ ಮಾಡಿತ್ತು. ಇದರಿಂದ ಅಂತಿಮ 12 ಎಸೆತದಲ್ಲಿ ಭಾರತದ ಗೆಲುವಿಗೆ 17 ರನ್ ಅವಶ್ಯಕತೆ ಇತ್ತು. 18ನೇ ಓವರ್‌ನ ಕೊನೆಯ ಎಸೆತದಲ್ಲಿ ಭಾರತ ಮೇಲುಗೈ ಸಾಧಿಸಿದರೆ, 19ನೇ ಓವರ್‌ನ ಆರಂಭಿಕ ಮೂರು ಎಸೆತದಲ್ಲಿ ನಿರೀಕ್ಷಿತ ರನ್ ಬರಲಿಲ್ಲ. ಆದರೆ ನಾಲ್ಕನೇ ಎಸೆತದ ಬೌಂಡರಿ ಕೊಂಚ ನಿರಾಳರನ್ನಾಗಿ ಮಾಡಿತ್ತು. ಆದರೆ ಶಿವಂ ದುಬೆ 33 ರನ್ ಸಿಡಿಸಿ ಔಟಾದರು.

ಅಂತಿಮ 6 ಎಸೆತದಲ್ಲಿ ಭಾರತದ ಗೆಲುವಿಗೆ 10 ರನ್
ಕೊನೆಯ 6 ಎಸೆತದಲ್ಲಿ ಭಾರತದ ಗೆಲುವಿಗೆ 10 ರನ್ ಬೇಕಿತ್ತು. ಎರಡನೇ ಎಸೆತದಲ್ಲಿ ತಿಲಕ್ ವರ್ಮಾ ಭರ್ಜರಿ ಸಿಕ್ಸರ್ ಪಂದ್ಯದ ಗತಿ ಬದಲಿಸಿತ್ತು. ಬಳಿಕ 4 ಎಸೆತದಲ್ಲಿ ಭಾರತದ ಗೆಲುವಿಗೆ 2 ರನ್ ಅವಶ್ಯಕತೆ ಇತ್ತು. ರಿಂಕು ಸಿಂಗ್ ಬೌಂಡರಿ ಮೂಲಕ ಭಾರತ 5 ವಿಕೆಟ್ ಗೆಲುವು ಸಾಧಿಸಿತು. ತಿಲಕ್ ವರ್ಮಾ ಅಜೇಯ 69 ರನ್ ಸಿಡಿಸಿದರು.