ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಧನ ಸೋರಿಕೆಯಿಂದಾಗಿ ಶ್ರೀನಗರಕ್ಕೆ ಹೊರಟಿದ್ದ ಇಂಡಿಗೋ ವಿಮಾನವನ್ನ ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿರುವುದಾಗಿ ವರದಿಯಾಗಿದೆ.
ಕೋಲ್ಕತ್ತಾದಿಂದ ಶ್ರೀನಗರಕ್ಕೆ ಹೊರಟಿದ್ದ ವಿಮಾನದಲ್ಲಿ ಇಂಧನ ಸೋರಿಕೆಯಾಗುತ್ತಿರುವುದು ಕಂಡುಬಂದಿದೆ. ಕೂಡಲೇ ಎಚ್ಚೆತ್ತ ಪೈಲಟ್ ವಿಮಾನವನ್ನ ತುರ್ತು ಭೂಸ್ಪರ್ಶ ಮಾಡಿಸಿದ್ದಾರೆ. ಎಲ್ಲಾ 166 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ವಾರಾಣಸಿ ಪೊಲೀಸರು ತಿಳಿಸಿದ್ದಾರೆ.
ಇನ್ನೂ ವಿಮಾನ ನಿಲ್ದಾಣದ ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿರುವುದಾಗಿ ತಿಳಿಸಿದ್ದಾರೆ. ಉಳಿದ ವಿಮಾನಗಳ ಕಾರ್ಯಾಚರಣೆಯಲ್ಲಿ ಯಾವುದೇ ವ್ಯತ್ಯಯ ಕಂಡುಬಂದಿಲ್ಲವೆಂದು ಹೇಳಿದ್ದಾರೆ.
ವಾರಾಣಸಿಯಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ: ಇಲ್ಲದಿದ್ರೆ ಅನಾಹುತ ಆಗ್ತಿತ್ತು!

