ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಕೆಲವು ದಿನಗಳಿಂದ ಭಾರತೀಯ ವಿಮಾನಯಾನ ಸಂಸ್ಥೆಯಾಗಿರುವ ಇಂಡಿಗೋ ವಿಮಾನಗಳು ಭಾರೀ ಸುದ್ದಿಯಲ್ಲಿದೆ,ಗುರುವಾರ ಬೆಂಗಳೂರು ಸೇರಿ ದೇಶದ ಹಲವೆಡೆ 500ಕ್ಕೂ ಅಧಿಕ ವಿಮಾನಗಳನ್ನು ರದ್ದುಗೊಳಿಸಿದ್ದ ಇಂಡಿಗೋ, ಶುಕ್ರವಾರ ಮತ್ತೆ 500 ವಿಮಾನಗಳ ಹಾರಾಟವನ್ನು ರದ್ದುಪಡಿಸಿದೆ.
ಕಳೆದ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಂಡಿಗೋದ ಸಾವಿರಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಇಂಡಿಗೋ ಸಂಸ್ಥೆ ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದ್ದು, ಫೆಬ್ರವರಿ ವೇಳೆಗೆ ಸಮಸ್ಯೆ ಸರಿಪಡಿಸುವುದಾಗಿ ಭರವಸೆ ನೀಡಿದೆ. ಈ ಬಿಕ್ಕಟ್ಟಿನ ಬೆನ್ನಲ್ಲೇ ಡಿಜಿಸಿಎ ರೋಸ್ಟರ್ ಆದೇಶವನ್ನು ಹಿಂಪಡೆದಿದೆ.
ವಿಮಾನಯಾನ ಸಿಬ್ಬಂದಿ ಸಾಪ್ತಾಹಿಕ ವಿಶ್ರಾಂತಿಗೆ ರಜೆಯನ್ನು ಬದಲಾಯಿಸಬಾರದು ಎಂಬ ತನ್ನ ಇತ್ತೀಚಿನ ನಿರ್ದೇಶನವನ್ನು ಡಿಜಿಸಿಎ ತಕ್ಷಣವೇ ಹಿಂದಕ್ಕೆ ಪಡೆದುಕೊಂಡಿದೆ.
ಪ್ಲೈಟ್ ಡ್ಯೂಟಿ ಟೈಮ್ ಲಿಮಿಟೇಷನ್ ನಿಯಮದಿಂದ ಒಂದು ವಾರಕ್ಕೆ 2 ದಿನ ಪೈಲಟ್ ಗಳಿಗೆ ವಿಶ್ರಾಂತಿ ನೀಡಬೇಕಾಗಿತ್ತು . ಈಗ ಈ ನಿಯಮ ಕಡ್ಡಾಯ ಜಾರಿಯಿಂದ ವಿನಾಯಿತಿ ನೀಡಲಾಗಿದೆ. ಇದರಿಂದಾಗಿ ಪೈಲಟ್ ಗಳ ಕೊರತೆಯ ಸಮಸ್ಯೆಯು ಸ್ಪಲ್ಪ ಮಟ್ಟಿಗೆ ಬಗೆಹರಿದು ಪ್ರಯಾಣಿಕರ ಸಂಕಷ್ಟ ಸ್ಪಲ್ಪ ಪರಿಹಾರವಾಗುವ ನಿರೀಕ್ಷೆ ಇದೆ.
ಇನ್ನೂ ಇಂಡಿಗೋ ಪ್ರಯಾಣಿಕರ ಪರದಾಟ, ಪೈಲಟ್ ಗಳ ಕೊರತೆ ಹಾಗೂ ಅದನ್ನು ಬಗೆಹರಿಸಲು ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ನಾಗರಿಕ ವಿಮಾನಯಾನ ಖಾತೆ ಸಚಿವ ರಾಮ ಮೋಹನ್ ನಾಯ್ಡು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ವಿವರಣೆ ನೀಡಿದ್ದಾರೆ.
ಸಿಬ್ಬಂದಿ ಸಾಪ್ತಾಹಿಕ ವಿಶ್ರಾಂತಿಗೆ ಬದಲಾಗಿ ರಜೆ ಬಳಸುವುದನ್ನು ನಿಷೇಧಿಸುವ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂತೆಗೆದುಕೊಂಡಿದೆ.24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಡಿಜಿಸಿಎ ತನ್ನ ಎಫ್‌ಡಿಟಿಎಲ್ ಮಾನದಂಡಗಳಿಗೆ ಮಾಡಿದ ಎರಡನೇ ಬದಲಾವಣೆ ಇದಾಗಿದೆ. ಗುರುವಾರ ರಾತ್ರಿ ಪೈಲಟ್ ಹಾರಾಟ ನಡೆಸಬಹುದಾದ ಸತತ ಗಂಟೆಗಳ ಸಂಖ್ಯೆಯ ಮಿತಿಯನ್ನು 12 ರಿಂದ 14 ಕ್ಕೆ ವಿಸ್ತರಿಸಿತ್ತು. ಮುಂದಿನ 48 ಗಂಟೆಗಳಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಇಂಡಿಗೋ ಭರವಸೆ ನೀಡಿದೆ.

