ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶೀಯ ವಿಮಾನಯಾನ ವ್ಯವಸ್ಥೆಯಲ್ಲಿನ ಅಸ್ತವ್ಯಸ್ತತೆ ಕುರಿತಂತೆ ದೆಹಲಿ ಹೈಕೋರ್ಟ್ ಗಂಭೀರ ಅಸಮಾಧಾನ ವ್ಯಕ್ತಪಡಿಸಿದೆ. ಇಂಡಿಗೋ ಸಂಸ್ಥೆಯಲ್ಲಿ ನಡೆದ ವಿಮಾನ ರದ್ದತಿ ಹಾಗೂ ವಿಳಂಬಗಳು ಕೇವಲ ಪ್ರಯಾಣಿಕರ ಅಸೌಲಭ್ಯಕ್ಕೆ ಸೀಮಿತವಾಗಿಲ್ಲ, ವ್ಯವಸ್ಥೆಯ ಮೇಲೂ ದುಷ್ಪರಿಣಾಮ ಬೀರಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇಂತಹ ಗಂಭೀರ ಪರಿಸ್ಥಿತಿ ಹೇಗೆ ಉಂಟಾಯಿತು ಎಂಬುದಕ್ಕೆ ಕೇಂದ್ರ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು ಎಂದು ಪೀಠ ಸೂಚಿಸಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಇಂಡಿಗೋ ವಿಮಾನಗಳು ರದ್ದಾದ ಸಂದರ್ಭದಲ್ಲೇ ಇತರ ವಿಮಾನಯಾನ ಸಂಸ್ಥೆಗಳು ಟಿಕೆಟ್ ದರಗಳನ್ನು ಅತಿಯಾಗಿ ಏರಿಸಿರುವುದನ್ನು ಪ್ರಶ್ನಿಸಿತು. ಸಾಮಾನ್ಯವಾಗಿ ಐದು ಸಾವಿರ ರೂ.ಗಳ ಸುತ್ತಮುತ್ತ ಇರುವ ಟಿಕೆಟ್ ದರಗಳು ಏಕಾಏಕಿ ಮೂರೂವತ್ತು ಸಾವಿರ ರೂ.ಗಳಿಂದ ನಲವತ್ತು ಸಾವಿರ ರೂ.ವರೆಗೆ ಜಿಗಿಯಲು ಹೇಗೆ ಅವಕಾಶ ದೊರೆಯಿತು ಎಂದು ಕೋರ್ಟ್ ಕಿಡಿಕಾರಿತು.
ಬಿಕ್ಕಟ್ಟನ್ನು ನೆಪ ಮಾಡಿಕೊಂಡು ಇತರ ಸಂಸ್ಥೆಗಳು ಲಾಭ ಗಳಿಸುವುದನ್ನು ಹೇಗೆ ಸಮರ್ಥಿಸಬಹುದು ಎಂಬ ಪ್ರಶ್ನೆಯೂ ಪೀಠದಿಂದ ಕೇಳಿಬಂತು.
ಇದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ, ವಿಮಾನಯಾನ ಕ್ಷೇತ್ರದಲ್ಲಿ ಎಲ್ಲ ಕಾನೂನುಬದ್ಧ ನಿಯಮಗಳೂ ಜಾರಿಯಲ್ಲಿವೆ ಎಂದು ತಿಳಿಸಿದರು. ವಿಮಾನ ಕರ್ತವ್ಯದ ಸಮಯ ಮಿತಿಗೆ ಸಂಬಂಧಿಸಿದ ನಿಯಮಗಳನ್ನು ಜಾರಿಗೆ ತರುವ ಪ್ರಯತ್ನ ನಡೆಯುತ್ತಿದ್ದು, ಇಂಡಿಗೋ ಸಂಸ್ಥೆಯಿಂದ ಈ ಕುರಿತು ಸಮಯ ವಿಸ್ತರಣೆ ಕೋರಲಾಗಿದೆ ಎಂದರು.
ಈ ನಡುವೆಯೇ ಇಂಡಿಗೋಗೆ ಶೋ-ಕಾಸ್ ನೋಟಿಸ್ ನೀಡಲಾಗಿದ್ದು, ಸಂಸ್ಥೆ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚನೆ ಸಲ್ಲಿಸಿದೆ. ಪರಿಸ್ಥಿತಿಯನ್ನು ಶೀಘ್ರ ಸರಿಪಡಿಸುವುದಾಗಿ ಭರವಸೆ ನೀಡಲಾಗಿದೆ ಎಂದು ಕೇಂದ್ರವು ಹೈಕೋರ್ಟ್‌ಗೆ ತಿಳಿಸಿದೆ.

