ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಸಕ್ತ ಸಾಲಿನಲ್ಲಿ ಸುರಿದ ದಾಖಲೆ ಪ್ರಮಾಣದ ಭಾರಿ ಮಳೆಯಿಂದ ತೀವ್ರ ಹಾನಿಗೊಳಗಾಗಿರುವ ಔರಾದ್ (ಬಿ) ವಿಧಾನಸಭಾ ಕ್ಷೇತ್ರದ ರಸ್ತೆ ಮತ್ತು ಸೇತುವೆಗಳ ದುರಸ್ತಿಗಾಗಿ ಕೇವಲ 29.34 ಲಕ್ಷ ಬಿಡುಗಡೆ ಮಾಡಿರುವುದಕ್ಕೆ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಪ್ರಭು ಬಿ. ಚವ್ಹಾಣ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಅಲ್ಪ ಮೊತ್ತದ ಅನುದಾನವು “ಜನವಿರೋಧಿ” ನಡೆ ಎಂದು ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಶಾಸಕರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ನೀಡಿದ ಲಿಖಿತ ಉತ್ತರವೇ ಈ ಅಸಮಾಧಾನಕ್ಕೆ ಕಾರಣವಾಗಿದೆ.
ಸಚಿವರು ತಮ್ಮ ಲಿಖಿತ ಉತ್ತರದಲ್ಲಿ, ಔರಾದ್ (ಬಿ) ಕ್ಷೇತ್ರದಲ್ಲಿ ಮಳೆಯಿಂದ ಕೆಲವು ರಸ್ತೆಗಳು ಹಾಳಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. 2025-26ನೇ ಸಾಲಿನ ಮುಖ್ಯಮಂತ್ರಿಗಳ ಅನುದಾನದಡಿ 39.13 ಲಕ್ಷ ಮಂಜೂರು ಮಾಡಿದ್ದು, ಅದರಲ್ಲಿ 29.34 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದರೊಂದಿಗೆ, ‘ಪ್ರಗತಿ ಪಥ’ ಯೋಜನೆಯಡಿ ಕ್ಷೇತ್ರದ ವ್ಯಾಪ್ತಿಯಲ್ಲಿ 22 ಕಿ.ಮೀ ಉದ್ದದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 16.04 ಕೋಟಿ ಹಂಚಿಕೆ ಮಾಡಲಾಗಿದ್ದು, ಆರ್ಥಿಕ ಇಲಾಖೆಯು ಒದಗಿಸುವ ಅನುದಾನದ ಮಿತಿಯೊಳಗೆ ಅಭಿವೃದ್ಧಿ ಕ್ರಮ ಕೈಗೊಳ್ಳಲಾಗುವುದು ಎಂದೂ ತಿಳಿಸಲಾಗಿದೆ.
ಸರ್ಕಾರದ ಈ ಉತ್ತರದಿಂದ ನಿರಾಶೆಗೊಂಡಿರುವ ಶಾಸಕ ಪ್ರಭು ಚವ್ಹಾಣ್ ಅವರು ಪ್ರಕಟಣೆ ಮೂಲಕ ತಮ್ಮ ಬೇಸರ ಹೊರಹಾಕಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಮಳೆಯಾಗಿದ್ದು, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಔರಾದ್ (ಬಿ) ಕ್ಷೇತ್ರದಲ್ಲೇ ಅತಿ ಹೆಚ್ಚಿನ ಹಾನಿ ಸಂಭವಿಸಿದೆ. ಗ್ರಾಮೀಣ ಭಾಗದ ಬಹುತೇಕ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ.
ರಸ್ತೆ, ಸೇತುವೆ, ಕೆರೆ-ಕಟ್ಟೆಗಳು ಒಡೆದಿವೆ, ಹಾಗೂ ಶಾಲೆ, ಅಂಗನವಾಡಿ ಸೇರಿದಂತೆ ಅನೇಕ ಸಾರ್ವಜನಿಕ ಆಸ್ತಿಪಾಸ್ತಿಗಳು ಹಾನಿಗೀಡಾಗಿ ನೂರಾರು ಕೋಟಿ ರೂಪಾಯಿಗಳಷ್ಟು ನಷ್ಟ ಉಂಟಾಗಿದೆ. ಜನ-ಜಾನುವಾರುಗಳು ಕೊಚ್ಚಿಕೊಂಡು ಹೋಗಿರುವ ಘಟನೆಗಳೂ ಸಂಭವಿಸಿವೆ.
“ಸಂಕಷ್ಟದಲ್ಲಿರುವ ಜನತೆಗೆ ನೆರವಾಗಬೇಕಾದ ಸರ್ಕಾರವು ಈ ವ್ಯಾಪಕ ಹಾನಿಗೆ ಪ್ರತಿಯಾಗಿ ಅತ್ಯಲ್ಪ ಪ್ರಮಾಣದ ಅನುದಾನ ನೀಡುವ ಮೂಲಕ ಜನ ವಿರೋಧಿಯಂತೆ ನಡೆದುಕೊಂಡಿದೆ” ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಾನಿಯಾಗಿರುವ ಎಲ್ಲ ರಸ್ತೆ, ಸೇತುವೆ, ಶಾಲೆ, ಅಂಗನವಾಡಿ ಸೇರಿದಂತೆ ಸರ್ಕಾರಿ ಕಛೇರಿಗಳನ್ನು ದುರಸ್ತಿಗೊಳಿಸಲು ವಿಶೇಷ ಪ್ಯಾಕೇಜ್ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದರೂ, “ಸರ್ಕಾರ ಕಣ್ಣು, ಕಿವಿ ಇಲ್ಲದಂತೆ ವರ್ತಿಸುತ್ತಿದ್ದು, ನೊಂದವರ ಧ್ವನಿ ಕೇಳಿಸಿಕೊಳ್ಳುತ್ತಿಲ್ಲ” ಎಂದು ದೂರಿದ್ದಾರೆ.
ಶಾಸಕರು ತಕ್ಷಣವೇ ಅತೀವೃಷ್ಠಿ ಪೀಡಿತ ಪ್ರದೇಶಗಳ ದುರಸ್ತಿಗೆ ಹೆಚ್ಚಿನ ಅನುದಾನ ಒದಗಿಸಿ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

