January 30, 2026
Friday, January 30, 2026
spot_img

ಕುಟುಂಬದಿಂದ ದೂರವಾಗಿ ಅಲೆಮಾರಿಯಂತೆ ಬದುಕುತ್ತಿದ್ದ ವ್ಯಕ್ತಿಯನ್ನು ಫ್ಯಾಮಿಲಿ ಜತೆ ಸೇರಿಸಿದ ಇನ್ಸ್ಟಾಗ್ರಾಮ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಕಸ್ಮಿಕವಾಗಿ ಕುಟುಂಬದಿಂದ ಕಾಣೆಯಾಗಿ ನಿರ್ಗತಿಕನಾಗಿ ಬದುಕುತ್ತಿದ್ದ ವೃದ್ಧ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣ ಇನ್ಸ್​ಸ್ಟಾಗ್ರಾಂ ಮೂಲಕ ಮತ್ತೆ ಕುಟುಂಬ ಸೇರಿದ ಘಟನೆ ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯಲ್ಲಿ ನಡೆದಿದೆ.

ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಅಮರ್​ಪುರ್ ತಾಲೂಕಿನ ಧನ್ವಾಸಿ ಗ್ರಾಮದ ಪ್ರೀತಂ ಸಿಂಗ್(60) ಎಂಬವರು ಮತ್ತೆ ಕುಟುಂಬ ಸೇರಿರುವವರು. ಇವರು ತಮ್ಮ ಕುಟುಂಬದವರೊಂದಿಗೆ ಕೂಲಿ ಕೆಲಸಕ್ಕಾಗಿ ಚಾಮರಾಜನಗರ ಜಿಲ್ಲೆಯ ಯಳಂದೂರಿಗೆ ಬಂದಿದ್ದರು. ಆದರೆ, ಅಚಾನಾಕ್ಕಾಗಿ ಕುಟುಂಬದದಿಂದ ಬೇರೆಯಾಗಿ ದಾರಿ, ಭಾಷೆ ಯಾವುದೂ ತಿಳಿಯದೆ ಪರದಾಡಿ ನಿರ್ಗತಿಕರಾಗಿದ್ದರು.

ಹಿಂದಿ ಬಿಟ್ಟು ಬೇರೆ ಭಾಷೆ ಗೊತ್ತಿಲ್ಲದೇ, ಮನೆಯವರ ಫೋನ್ ನಂಬರೂ ತಿಳಿಯದೇ, ವಾಪಸ್ ಹೋಗಲು ಗೊತ್ತಾಗದೇ ಮನೆಯವರ ಪಾಲಿಗೆ ನಾಪತ್ತೆಯಾಗಿ ಯಳಂದೂರು ಬಸ್ ನಿಲ್ದಾಣದ ಸುತ್ತಮುತ್ತ ಓಡಾಡುತ್ತಾ, ರಾತ್ರಿ ವೇಳೆ ರಸ್ತೆ ಬದಿ ಮಲಗಿ ದಿನ ಕಳೆಯುತ್ತಿದ್ದರು.

ನಿರ್ಗತಿಕ ವೃದ್ಧನನ್ನು ಗಮನಿಸಿದ ಯಳಂದೂರು ಠಾಣೆ ಪೊಲೀಸರು, ನವೆಂಬರ್ 11ರಂದು ಸಂತೇಮರಹಳ್ಳಿಯ ಜ್ಞಾನ ಸಿಂಧು ವೃದ್ಧಾಶ್ರಮಕ್ಕೆ ಸೇರಿಸಿದ್ದರು. ಅಂದಿನಿಂದ ವೃದ್ಧಾಶ್ರಮದಲ್ಲಿದ್ದ ಪ್ರೀತಂ ಸಿಂಗ್ ಊರು, ಮನೆಯವರ ಬಗ್ಗೆ ಹಿಂದಿಯಲ್ಲಿ ಹೇಳಿಕೊಂಡು ಪೇಚಾಡುತ್ತಿದ್ದರು. ಇವರು ಸರಿಯಾಗಿ ಊರಿನ ಹೆಸರು ಹೇಳುತ್ತಿದ್ದಾರಾ ಎನ್ನುವ ಗೊಂದಲವೂ ಮೂಡಿತ್ತು.

ಇನ್ಸ್​ಸ್ಟಾಗ್ರಾಂನಿಂದ ಸಿಕ್ಕ ಮಾಹಿತಿ ಆಧರಿಸಿ ಡಿ.30ರಂದು ಪ್ರೀತಂ ಸಿಂಗ್ ಪುತ್ರ ರಾಜೇಶ್ ಸಿಂಗ್ ಧುರ್ವಿ ಇಲ್ಲಿಗೆ ಹುಡುಕಿಕೊಂಡು ಬಂದಿದ್ದಾರೆ. ಕಾನೂನು ಪ್ರಕಾರ, ಪ್ರೀತಂ ಸಿಂಗ್‌ರನ್ನು ಯಳಂದೂರು ಪೊಲೀಸರ ಮೂಲಕ ಮಗನಿಗೆ ಒಪ್ಪಿಸಲಾಯಿತು.

ಯಳಂದೂರಿನ ಬಸ್ ನಿಲ್ದಾಣದ ಬಳಿ ಇರುತ್ತಿದ್ದ ಪ್ರೀತಂ ಸಿಂಗ್‌ ಅವರನ್ನು ಪೊಲೀಸರು ವೃದ್ಧಾಶ್ರಮಕ್ಕೆ ಕರೆತಂದು ಬಿಟ್ಟಿದ್ದರು. ಇವರ ಬಗ್ಗೆ ಮಹೇಶ್ ಎಂಬವರು ವಿಡಿಯೋ ಮಾಡಿ ಇನ್ಸ್​ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡುವ ಮೂಲಕ ಕುಟುಂಬದವರನ್ನು ಪತ್ತೆ ಮಾಡಿದರು. ಪ್ರೀತಂ ಸಿಂಗ್ ಮಗ ಬಂದು ಕರೆದುಕೊಂಡು ಹೋಗಿದ್ದಾರೆ ಎಂದು ವೃದ್ಧಾಶ್ರಮದ ಅಧೀಕ್ಷಕ ಮಹಾದೇವಸ್ವಾಮಿ ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !