January21, 2026
Wednesday, January 21, 2026
spot_img

ಇನ್‌ಸ್ಟಾಗ್ರಾಂ ಟು ಇನ್‌ವೆಸ್ಟಿಗೇಶನ್: ಯುವತಿಯನ್ನು ಹುಡುಕಿಕೊಂಡು ಬಂದವನಿಗೆ ಬಿತ್ತು ಸಂಕೋಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯನ್ನು ಹುಡುಕಿಕೊಂಡು ಹರಿಯಾಣದಿಂದ ಬೆಂಗಳೂರಿಗೆ ಬಂದಿದ್ದ ‘ಪಾಗಲ್ ಪ್ರೇಮಿ’ಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಫಿಟ್‌ನೆಸ್ ಇನ್‌ಫ್ಲೂಯೆನ್ಸರ್ ಒಬ್ಬರಿಗೆ ಅಶ್ಲೀಲ ಸಂದೇಶ ಕಳುಹಿಸಿ, ಬೆದರಿಕೆ ಹಾಕುತ್ತಿದ್ದ ಹರಿಯಾಣ ಮೂಲದ ಸುಧೀರ್ ಕುಮಾರ್ ಎಂಬಾತನನ್ನು ಬೆಂಗಳೂರಿನ ದಕ್ಷಿಣ ವಿಭಾಗದ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ವಾಸವಿರುವ ಸಂತ್ರಸ್ತ ಯುವತಿ ವೃತ್ತಿಯಲ್ಲಿ ಫಿಟ್‌ನೆಸ್ ಮತ್ತು ನ್ಯೂಟ್ರೀಷಿಯನ್ ಇನ್‌ಫ್ಲೂಯೆನ್ಸರ್ ಆಗಿದ್ದಾರೆ. ಇನ್‌ಸ್ಟಾಗ್ರಾಂ ಮೂಲಕ ಇವರ ಪರಿಚಯ ಮಾಡಿಕೊಂಡಿದ್ದ ಆರೋಪಿ ಸುಧೀರ್, ಮೊದಲಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಲು ಶುರು ಮಾಡಿದ್ದ. ದಿನಗಳೆದಂತೆ ಯುವತಿಯ ವಾಟ್ಸಪ್ ನಂಬರ್ ಪಡೆದುಕೊಂಡು ಅಲ್ಲಿಯೂ ಲೈಂಗಿಕವಾಗಿ ಪ್ರಚೋದಿಸುವಂತಹ ಮೆಸೇಜ್ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.

ಕೇವಲ ಮೆಸೇಜ್‌ಗಳಿಗೆ ಸೀಮಿತವಾಗದ ಈತ, ಹೇಗಾದರೂ ಮಾಡಿ ಯುವತಿಯನ್ನು ಭೇಟಿಯಾಗಲೇಬೇಕೆಂದು ಹರಿಯಾಣದಿಂದ ಬೆಂಗಳೂರಿಗೆ ರೈಲು ಹತ್ತಿದ್ದಾನೆ. ನಗರಕ್ಕೆ ಬಂದವನೇ ಯುವತಿ ಕೆಲಸ ಮಾಡುವ ಜಿಮ್ ಪತ್ತೆಹಚ್ಚಿ, ಅಲ್ಲಿನ ಸಹೋದ್ಯೋಗಿಗಳ ಬಳಿ ವಿಚಾರಿಸಿದ್ದಾನೆ. ಈ ವಿಷಯ ತಿಳಿದ ಯುವತಿ ತಕ್ಷಣವೇ ಎಚ್ಚೆತ್ತುಕೊಂಡು ಪೊಲೀಸ್ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡ ಮಹಿಳಾ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ. ಸದ್ಯ ಆರೋಪಿ ಜೈಲು ಕಂಬಿ ಎಣಿಸುತ್ತಿದ್ದಾನೆ.

Must Read