March 9, 2026
Monday, March 9, 2026
spot_img

ಪಶ್ಚಿಮ‌ ಬಂಗಾಳದಲ್ಲಿ ರಾಷ್ಟ್ರಪತಿಗೆ ಅವಮಾನ: ಮಮತಾ ಸರ್ಕಾರದ ವರ್ತನೆಗೆ ಚಾಟಿ ಬೀಸಿದ ಮೋದಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದಲ್ಲಿ ಶನಿವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗಾದ ಅವಮಾನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇಂದು ಮಮತಾ ಬ್ಯಾನರ್ಜಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ದ್ರೌಪದಿ ಮುರ್ಮು ಭಾಗವಹಿಸಿದ್ದ 9 ನೇ ಅಂತಾರಾಷ್ಟ್ರೀಯ ಸಂತಾಲ್ ಸಮ್ಮೇಳನದಲ್ಲಿ ನಡೆದ ದುರಾಡಳಿತವನ್ನು ಉಲ್ಲೇಖಿಸಿದ ಮೋದಿ, ನಮ್ಮ ದೇಶದಲ್ಲಿ ಒಬ್ಬ ವ್ಯಕ್ತಿ ಎಷ್ಟೇ ಶಕ್ತಿಶಾಲಿಯಾಗಿದ್ದರೂ, ಅವನು ಅಂತಿಮವಾಗಿ ಅಹಂಕಾರದಿಂದ ನಾಶವಾಗುತ್ತಾನೆ ಎಂದು ಹೇಳಲಾಗುತ್ತದೆ. ಇಂದು, ದ್ರೌಪದಿ ಮುರ್ಮು ಅವರ ಘನತೆಗೆ ಅವಮಾನ ಮಾಡಿದ ಟಿಎಂಸಿಯ ಕೊಳಕು ರಾಜಕೀಯ ಮತ್ತು ಅಧಿಕಾರದ ದುರಹಂಕಾರವು ಶೀಘ್ರದಲ್ಲೇ ಛಿದ್ರವಾಗಲಿದೆ ಗುಡುಗಿದರು.

ಬುಡಕಟ್ಟು ಮಹಿಳೆ ಮತ್ತು ದೇಶದ ರಾಷ್ಟ್ರಪತಿಯನ್ನು ಅವಮಾನಿಸಿದ್ದಕ್ಕಾಗಿ ಪಶ್ಚಿಮ ಬಂಗಾಳದ ಜನರು ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ. ಇದು ರಾಷ್ಟ್ರಪತಿಗಳಿಗೆ ಅಲ್ಲ, ಸಂವಿಧಾನಕ್ಕೆ ಮಾಡಿದ ಅವಮಾನ ಎಂದು ಪ್ರಧಾನಿ ಮೋದಿ ಹೇಳಿದರು.

ದ್ರೌಪದಿ ಮುರ್ಮು ಅವರು ಪ್ರಮುಖ ಸಂತಾಲ್ ಉತ್ಸವದಲ್ಲಿ ಭಾಗವಹಿಸಲು ಬಂಗಾಳಕ್ಕೆ ಹೋಗಿದ್ದರು. ಆದರೆ ರಾಷ್ಟ್ರಪತಿಗಳನ್ನು ಗೌರವಿಸುವ ಬದಲು, ಟಿಎಂಸಿ ಈ ಪವಿತ್ರ ಮತ್ತು ಮಹತ್ವದ ಕಾರ್ಯಕ್ರಮವನ್ನು ಬಹಿಷ್ಕರಿಸಿತು ಎಂದು ಮೋದಿ ಟೀಕಿಸಿದರು.

ಮುರ್ಮು ಅವರು ಬುಡಕಟ್ಟು ಸಮುದಾಯದಿಂದ ಬಂದವರು. ಟಿಎಂಸಿ ಸರ್ಕಾರವು ಈ ಕಾರ್ಯಕ್ರಮವನ್ನು ಹಾಳುಗೆಡವಿತು. ಇದು ರಾಷ್ಟ್ರಪತಿಗಳಿಗೆ ಮಾತ್ರವಲ್ಲದೆ ಭಾರತದ ಸಂವಿಧಾನಕ್ಕೂ ಮಾಡಿದ ಅವಮಾನ. ಇದು ಪ್ರಜಾಪ್ರಭುತ್ವದ ಶ್ರೇಷ್ಠ ಸಂಪ್ರದಾಯಕ್ಕೂ ಮಾಡಿದ ಅವಮಾನ ಎಂದು ಮೋದಿ ಹೇಳಿದರು.

ಪಶ್ಚಿಮ ಬಂಗಾಳ ಸರ್ಕಾರವು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಗವಹಿಸಬೇಕಿದ್ದ ಕಾರ್ಯಕ್ರಮದ ಸ್ಥಳವನ್ನು ಬದಲಾಯಿಸಿದ್ದಕ್ಕೆ ರಾಷ್ಟ್ರಪತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಸಂತಾಲ್ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ರಾಷ್ಟ್ರಪತಿಗಳಿಗೆ ಸ್ವಾಗತ ಕೋರಲು ಮುಖ್ಯಮಂತ್ರಿಯಾಗಲಿ ಅಥವಾ ಅವರ ಸಂಪುಟದ ಯಾವುದೇ ಸಚಿವರಾಗಲಿ ಬಂದಿರಲಿಲ್ಲ.ಇದನ್ನು ಪ್ರಶ್ನಿಸಿದ ರಾಷ್ಟ್ರಪತಿಗಳು, ನಾನು ಕೂಡ ಬಂಗಾಳದ ಮಗಳು, ಮಮತಾ ನನಗೆ ತಂಗಿಯಂತೆ. ಕಾರ್ಯಕ್ರಮದ ಸ್ಥಳವನ್ನು ಕೂಡ ಕೊನೆಯ ಕ್ಷಣದಲ್ಲಿ ಬದಲಿಸಲಾಗಿದೆ. ಇದು ಯಾಕೆ ಎಂದು ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !