ಜಗತ್ತಿನ ಪ್ರತಿಯೊಬ್ಬ ಮನುಷ್ಯನು ತನ್ನ ದೀರ್ಘಾಯುಷ್ಯಕ್ಕಾಗಿ ಹಲವು ರೀತಿಯ ಜೀವನಶೈಲಿ, ಆಹಾರ ಪದ್ಧತಿ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಹಿರಿಯರಿಗೆ ನಮಸ್ಕಾರ ಮಾಡಿದಾಗ ದೀರ್ಘಾಯುಷಿ ಆಗು ಎಂದು ಹಾರೈಸುವ ಸಂಪ್ರದಾಯವೇ ಅದಕ್ಕೆ ಸಾಕ್ಷಿ. ನೂರಕ್ಕೂ ಹೆಚ್ಚು ವರ್ಷ ಬದುಕಿದವರ ಉದಾಹರಣೆಗಳು ನಮ್ಮ ಸುತ್ತಲೂ ಇದ್ದರೂ, ಕೆಲವು ದೇಶಗಳಲ್ಲಿ ದೀರ್ಘಕಾಲ ಬದುಕುವವರ ಸಂಖ್ಯೆ ಅತಿಯಾಗಿ ಕಂಡುಬರುತ್ತದೆ. ಇಂತಹ ದೇಶಗಳ ಬಗ್ಗೆ ತಿಳಿದುಕೊಳ್ಳೋಣ.
ಮೊನಾಕೊ – ಜಗತ್ತಿನಲ್ಲಿ ಅತಿಹೆಚ್ಚು ದೀರ್ಘಾಯುಷ್ಯ ಹೊಂದಿರುವ ಜನರನ್ನು ಮೊನಾಕೊ ಹೊಂದಿದೆ. ಇಲ್ಲಿ ಜನರು ಸರಾಸರಿ 85 ರಿಂದ 87 ವರ್ಷಗಳವರೆಗೆ ಬದುಕುತ್ತಾರೆ. ಬಡತನ ಕಡಿಮೆ, ಜೊತೆಗೆ ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳಿರುವುದೇ ಇದರ ಮುಖ್ಯ ಕಾರಣ.
ಜಪಾನ್ – ದೀರ್ಘಾಯುಷ್ಯದ ಹೆಸರು ಕೇಳಿದರೆ ಮೊದಲು ನೆನಪಾಗುವ ದೇಶ ಜಪಾನ್. ಇಲ್ಲಿಯ ಜನರು ಸರಾಸರಿ 85 ವರ್ಷ ಬದುಕುತ್ತಾರೆ. 2050ರಲ್ಲಿ ಇದು 88 ವರ್ಷಗಳಿಗೂ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಜಪಾನ್‌ನಲ್ಲಿ ಬೊಜ್ಜುತನದ ಸಮಸ್ಯೆ ಕಡಿಮೆ ಇರುವುದೇ ಆರೋಗ್ಯದ ಗುಟ್ಟು.
ಸ್ವಿಟ್ಜರ್ಲ್ಯಾಂಡ್ – ಪ್ರಕೃತಿಯ ಸೌಂದರ್ಯದಿಂದ ಪ್ರಸಿದ್ಧವಾಗಿರುವ ಈ ದೇಶದಲ್ಲಿ ಜನರು ಸರಾಸರಿ 84 ವರ್ಷ ಬದುಕುತ್ತಾರೆ. ಭವಿಷ್ಯದಲ್ಲಿ ಈ ಅಂಕಿ 87.7ಕ್ಕೆ ಏರಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.
ಇಟಲಿ ಮತ್ತು ಸಿಂಗಾಪೂರ್ – ಈ ಎರಡು ದೇಶಗಳಲ್ಲೂ ಜನರು ಸುಮಾರು 84 ವರ್ಷ ಬದುಕುತ್ತಾರೆ. ವಿಶೇಷವಾಗಿ ಸಿಂಗಾಪೂರ್‌ನ ಆರೋಗ್ಯ ವ್ಯವಸ್ಥೆ ಜಗತ್ತಿನಲ್ಲಿಯೇ ಶ್ರೇಷ್ಠವೆಂದು ಪರಿಗಣಿಸಲಾಗಿದೆ.
ಇತರ ದೇಶಗಳು – ಸ್ಪೇನ್, ದಕ್ಷಿಣ ಕೊರಿಯಾ ಮತ್ತು ಆಸ್ಟ್ರೇಲಿಯಾದಲ್ಲಿಯೂ ಜನರು ಸರಾಸರಿ 83 ರಿಂದ 84 ವರ್ಷಗಳವರೆಗೆ ಬದುಕುತ್ತಾರೆ.
ಇನ್ನು ಭಾರತದ ವಿಷಯಕ್ಕೆ ಬಂದರೆ, ಇಲ್ಲಿ ಜನರು ಸರಾಸರಿ 72 ರಿಂದ 77 ವರ್ಷಗಳವರೆಗೆ ಬದುಕುತ್ತಾರೆ. ಆದರೆ 2050ರ ವೇಳೆಗೆ ಇದು 87.7 ವರ್ಷಗಳವರೆಗೆ ಏರಿಕೆಯಾಗಲಿದೆ ಎಂದು ಅಂಕಿಅಂಶಗಳು ಸೂಚಿಸುತ್ತವೆ.
ದೀರ್ಘಾಯುಷ್ಯವು ದೇಶದ ಜೀವನಶೈಲಿ, ಆಹಾರ ಪದ್ಧತಿ ಮತ್ತು ಆರೋಗ್ಯ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದೆ. ಕೆಲ ರಾಷ್ಟ್ರಗಳಲ್ಲಿ ಉತ್ತಮ ವೈದ್ಯಕೀಯ ಸೇವೆಗಳು ಹಾಗೂ ಆರೋಗ್ಯಕರ ಜೀವನ ಪದ್ಧತಿಗಳಿಂದ ಜನರು ಹೆಚ್ಚು ಕಾಲ ಬದುಕುತ್ತಿದ್ದಾರೆ. ಭಾರತವೂ ಸಹ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಂಡರೆ ಭವಿಷ್ಯದಲ್ಲಿ ದೀರ್ಘಾಯುಷ್ಯದ ರಾಷ್ಟ್ರಗಳ ಸಾಲಿನಲ್ಲಿ ಸೇರಬಹುದು.