ಮಾನವ ಜೀವನದಲ್ಲಿ ನೀರು ಅತಿ ಮುಖ್ಯ. ಹಿಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಬಾವಿಯೇ ಮುಖ್ಯ ನೀರಿನ ಮೂಲವಾಗಿತ್ತು. ಇಂದಿಗೂ ಕೆಲವು ಕಡೆಗಳಲ್ಲಿ ಬಾವಿಗಳನ್ನು ಬಳಸಲಾಗುತ್ತಿವೆ. ಆದರೆ ಬಾವಿ ಎಂದರೆ ಅದು ಸದಾ ವೃತ್ತಾಕಾರದಲ್ಲಿಯೇ ಕಾಣಿಸುತ್ತದೆ. ಹೀಗಿರುವಾಗ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡುತ್ತದೆ — ಏಕೆ ಬಾವಿಗಳನ್ನು ಸದಾ ವೃತ್ತಾಕಾರದಲ್ಲಿಯೇ ನಿರ್ಮಿಸುತ್ತಾರೆ, ಚೌಕ ಅಥವಾ ತ್ರಿಕೋನಾಕಾರದಲ್ಲಿ ಏಕೆ ಮಾಡುವುದಿಲ್ಲ? ಇದರ ಹಿಂದೆ ವೈಜ್ಞಾನಿಕ ಹಾಗೂ ಪ್ರಾಯೋಗಿಕ ಕಾರಣಗಳಿವೆ.
ಮೊದಲನೆಯದಾಗಿ, ಬಾವಿ ವೃತ್ತಾಕಾರದಲ್ಲಿರುವುದರಿಂದ ನೀರಿನ ಒತ್ತಡವು ಎಲ್ಲಾ ಕಡೆಗಳಲ್ಲಿಯೂ ಸಮಾನವಾಗಿ ಹಂಚಿಕೆಯಾಗುತ್ತದೆ. ಇದರಿಂದಾಗಿ ಬಾವಿಯ ಗೋಡೆಗಳ ಮೇಲೆ ಹೆಚ್ಚು ಒತ್ತಡ ಬಿದ್ದರೂ ಸಹ ಅದು ಸುಲಭವಾಗಿ ತಡೆಯುತ್ತದೆ. ಆದರೆ ಬಾವಿ ಚೌಕಾಕಾರ ಅಥವಾ ತ್ರಿಕೋನಾಕಾರವಾಗಿದ್ದರೆ, ನೀರಿನ ಒತ್ತಡ ಮೂಲೆಯ ಭಾಗಗಳ ಮೇಲೆ ಹೆಚ್ಚು ಬೀಳುತ್ತದೆ. ಇದರಿಂದ ಗೋಡೆಗಳು ಬೇಗ ದುರ್ಬಲಗೊಳ್ಳಿ ಒಡೆಯುವ ಸಾಧ್ಯತೆ ಹೆಚ್ಚುತ್ತದೆ.
ಇನ್ನೊಂದು ಪ್ರಮುಖ ಕಾರಣವೆಂದರೆ, ವೃತ್ತಾಕಾರದ ಗುಂಡಿಯನ್ನು ಅಗೆಯುವುದು ತುಂಬಾ ಸುಲಭ. ಮಣ್ಣು ತೆಗೆದು ಬಾವಿಯನ್ನು ಕೊರೆಯುವಾಗ ದುಂಡಾಕಾರದ ಆಕಾರ ಸಹಜವಾಗಿ ಸಿಗುತ್ತದೆ. ಆದರೆ ಚೌಕ ಅಥವಾ ಬೇರೆ ಆಕಾರಗಳಲ್ಲಿ ಬಾವಿ ನಿರ್ಮಾಣ ಮಾಡಲು ಹೆಚ್ಚು ಶ್ರಮ ಬೇಕಾಗುತ್ತದೆ.
ವೃತ್ತಾಕಾರದ ಬಾವಿಯಲ್ಲಿ ನೀರು ಹೆಚ್ಚು ಸಂಗ್ರಹವಾಗುತ್ತದೆ ಮತ್ತು ಸ್ವಚ್ಛಗೊಳಿಸುವುದೂ ಸುಲಭ. ಚೌಕಾಕಾರ ಅಥವಾ ತ್ರಿಕೋನಾಕಾರದ ಬಾವಿಯಲ್ಲಿ ಕೊಳಕು ಮೂಲೆಗಳಲ್ಲಿ ಸೇರುತ್ತದೆ, ಇದರಿಂದ ನೀರು ಕಲುಷಿತವಾಗಬಹುದು. ಜೊತೆಗೆ ವೃತ್ತಾಕಾರದ ಬಾವಿಯಲ್ಲಿ ನೀರಿನ ಹರಿವು ಸಹ ಅಡೆತಡೆಯಿಲ್ಲದೆ ನಿರಂತರವಾಗಿರುತ್ತದೆ.