ಪ್ರತಿ ವರ್ಷ ಡಿಸೆಂಬರ್ 3ರಂದು ಜಾಗತಿಕವಾಗಿ ಆಚರಿಸಲ್ಪಡುವ ದಿನವೇ ಅಂತಾರಾಷ್ಟ್ರೀಯ ವಿಶೇಷ ಚೇತನರ ದಿನ (International Day of Persons with Disabilities). ಈ ದಿನವು ವಿಶೇಷ ಚೇತನರ ಹಕ್ಕುಗಳು, ಗೌರವ, ಅವಕಾಶಗಳು ಹಾಗೂ ಸಮಾನತೆಯ ಬಗ್ಗೆ ಸಮಾಜಕ್ಕೆ ಜಾಗೃತಿ ಮೂಡಿಸುವ ಮಹತ್ವದ ದಿನವಾಗಿದೆ. ಶಾರೀರಿಕ, ಮಾನಸಿಕ, ದೃಷ್ಟಿ, ಶ್ರವಣ ಅಥವಾ ಬೌದ್ಧಿಕ ಅಸಮರ್ಥತೆ ಹೊಂದಿರುವ ವ್ಯಕ್ತಿಗಳ ಶಕ್ತಿ, ಸಾಮರ್ಥ್ಯ ಮತ್ತು ಅವರ ಕೊಡುಗೆಗಳನ್ನು ಜಗತ್ತಿಗೆ ಪರಿಚಯಿಸುವುದೇ ಈ ದಿನದ ಪ್ರಮುಖ ಉದ್ದೇಶವಾಗಿದೆ.
ಈ ದಿನದ ಇತಿಹಾಸವೇನು?:
1992ರಲ್ಲಿ ಯುನೈಟೆಡ್ ನೇಷನ್ಸ್ ಸಾಮಾನ್ಯ ಸಭೆಯು ಡಿಸೆಂಬರ್ 3ನ್ನು ಅಂತಾರಾಷ್ಟ್ರೀಯ ವಿಶೇಷ ಚೇತನರ ದಿನವಾಗಿ ಘೋಷಿಸಿತು. ವಿಶೇಷ ಚೇತನರು ಸಮಾಜದಿಂದ ಬೇರ್ಪಟ್ಟು ಬದುಕಬಾರದು, ಅವರಿಗೆ ಸಮಾನ ಹಕ್ಕು, ಶಿಕ್ಷಣ, ಉದ್ಯೋಗ ಮತ್ತು ಅವಕಾಶಗಳು ದೊರೆಯಬೇಕು ಎಂಬ ಚಿಂತನೆಯಿಂದ ಈ ದಿನದ ಆಚರಣೆಗೆ ಅಧಿಕೃತ ರೂಪ ನೀಡಲಾಯಿತು. 1981ರಲ್ಲಿ “ಅಂತಾರಾಷ್ಟ್ರೀಯ ವಿಶೇಷ ಚೇತನರ ವರ್ಷ”ವನ್ನು ಘೋಷಿಸಿದ್ದ ಯುಎನ್, ನಂತರ ಈ ವಿಷಯಕ್ಕೆ ಶಾಶ್ವತ ವೇದಿಕೆ ನೀಡುವ ಉದ್ದೇಶದಿಂದ 1992ರಲ್ಲಿ ಈ ದಿನವನ್ನು ಸ್ಥಾಪಿಸಿತು.
ವಿಶೇಷ ಚೇತನರ ದಿನದ ಮಹತ್ವವೇನು?
ಈ ದಿನವು ಸಮಾಜದಲ್ಲಿ ಇನ್ನೂ ಅಡಗಿರುವ ಭೇದಭಾವದ ಮನೋಭಾವನೆಯನ್ನು ಕಳೆದು, ವಿಶೇಷ ಚೇತನರನ್ನು ಸಮಾನ ನಾಗರಿಕರಂತೆ ನೋಡುವ ಚಿಂತನೆಗೆ ಉತ್ತೇಜನ ನೀಡುತ್ತದೆ. ಶಿಕ್ಷಣ, ಆರೋಗ್ಯ, ಉದ್ಯೋಗ, ತಂತ್ರಜ್ಞಾನ, ಸಾರಿಗೆ, ಕಟ್ಟಡ ವಿನ್ಯಾಸಗಳಲ್ಲಿ ಅವರಿಗಾಗಿಯೇ ಅನುಕೂಲಕರ ವ್ಯವಸ್ಥೆಗಳ ಅಗತ್ಯವನ್ನು ನೆನಪಿಸುತ್ತದೆ. ವಿಶೇಷ ಚೇತನರು ಸಹ ಕೇವಲ ಸಹಾಯ ಪಡೆದುಕೊಳ್ಳುವವರಲ್ಲ, ಅವರು ಸಮಾಜದ ಶಕ್ತಿಯುತವಾದ ನಿರ್ಮಾತೃಗಳು ಎಂಬ ಸಂದೇಶವನ್ನು ಈ ದಿನ ಸಾರುತ್ತದೆ.
ವಿಶೇಷ ಚೇತನರಿಗೆ ಅವಕಾಶ ನೀಡಿದರೆ ಅವರು ಅಸಾಧ್ಯವೆನಿಸುವ ಸಾಧನೆಗಳನ್ನು ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದನ್ನು ಜಗತ್ತಿಗೆ ಸಾಬೀತುಪಡಿಸುವವರು. ಆದ್ದರಿಂದ ಈ ದಿನ ಕೇವಲ ಆಚರಣೆ ಮಾತ್ರವಲ್ಲ, ಮಾನವೀಯತೆ, ಸಮಾನತೆ ಮತ್ತು ನ್ಯಾಯದ ಪ್ರತೀಕವೂ ಹೌದು.

