ಭಾಷೆ ಎಂದರೆ ಕೇವಲ ಸಂವಹನ ಸಾಧನವಲ್ಲ ಅದು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಗುರುತಿನ ಮೂಲ. ಈ ಮಹತ್ವವನ್ನು ಜಗತ್ತಿಗೆ ಸಾರಲು ಪ್ರತಿವರ್ಷ ಫೆಬ್ರವರಿ 21ರಂದು International Mother Language Day ಆಚರಿಸಲಾಗುತ್ತದೆ.
1952ರಲ್ಲಿ ಇಂದಿನ ಬಾಂಗ್ಲಾದೇಶ ಭಾಗವಾಗಿದ್ದ ಪೂರ್ವ ಪಾಕಿಸ್ತಾನದಲ್ಲಿ, ಬಂಗಾಳಿ ಭಾಷೆಗೆ ಅಧಿಕೃತ ಮಾನ್ಯತೆ ನೀಡುವಂತೆ ವಿದ್ಯಾರ್ಥಿಗಳು ಹೋರಾಟ ನಡೆಸಿದರು. ಈ ಪ್ರತಿಭಟನೆಯಲ್ಲಿ ಹಲವು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡರು. ಅವರ ತ್ಯಾಗವನ್ನು ಸ್ಮರಿಸಿ, ಭಾಷಾ ಹಕ್ಕಿನ ಮಹತ್ವವನ್ನು ಒತ್ತಿ ಹೇಳಲು ಈ ದಿನವನ್ನು ಗುರುತಿಸಲಾಯಿತು. 1999ರಲ್ಲಿ ಯುನೆಸ್ಕೋ ಫೆಬ್ರವರಿ 21ನ್ನು ಅಂತಾರಾಷ್ಟ್ರೀಯ ಮಾತೃಭಾಷಾ ದಿನವೆಂದು ಘೋಷಿಸಿತು.
ಇದನ್ನೂ ಓದಿ:
ಜಗತ್ತಿನಲ್ಲಿ ಸಾವಿರಾರು ಭಾಷೆಗಳು ಇದ್ದರೂ, ಅನೇಕವು ನಿಧಾನವಾಗಿ ಅಳಿವಿನ ಅಂಚಿನಲ್ಲಿವೆ. ಮಾತೃಭಾಷೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂಬ ಸಂದೇಶವನ್ನು ಈ ದಿನ ಸಾರುತ್ತದೆ. ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿ ಸಿಗುವುದು ಅವರ ಬೌದ್ಧಿಕ ಬೆಳವಣಿಗೆಗೆ ಸಹಕಾರಿ ಎಂಬುದು ಸಂಶೋಧನೆಗಳಿಂದ ತಿಳಿದುಬಂದಿದೆ.
ಮಾತೃಭಾಷೆ ನಮ್ಮ ಭಾವನೆಗಳಿಗೆ ಅತಿ ಹತ್ತಿರವಾದ ಭಾಷೆ. ಅದರಲ್ಲಿ ಮಾತಾಡುವಾಗ ನಮ್ಮ ಗುರುತು ಸ್ಪಷ್ಟವಾಗುತ್ತದೆ. ಭಾಷಾ ವೈವಿಧ್ಯವನ್ನು ಕಾಪಾಡುವುದು ಜಾಗತಿಕ ಸಾಂಸ್ಕೃತಿಕ ಸಂಪತ್ತನ್ನು ಉಳಿಸುವಂತೆಯೇ. ಆದ್ದರಿಂದ, ಮಾತೃಭಾಷೆಯನ್ನು ಗೌರವಿಸಿ, ಬಳಸುವ ಅಭ್ಯಾಸ ಬೆಳೆಸುವುದು ಈ ದಿನದ ನಿಜವಾದ ಉದ್ದೇಶ.



