March 8, 2026
Sunday, March 8, 2026
spot_img

International Women’s Day | ಆಕೆ ಹೆಣ್ಣು: ಇಡೀ ಸಮಾಜವನ್ನೇ ಬದಲಾಯಿಸಬಲ್ಲ ಶಕ್ತಿ ಇವಳಿಗಿದೆ

ಮಾರ್ಚ್ 8 ಬಂದರೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಸುರಿಮಳೆ ಶುರುವಾಗುತ್ತೆ. “ಹ್ಯಾಪಿ ವುಮೆನ್ಸ್ ಡೇ” ಎಂದು ಹೂಗುಚ್ಛ, ಕೇಕ್‌, ಡಿಸ್ಕೌಂಟ್ ಆಫರ್‌ಗಳು… ಎಲ್ಲವೂ ಕಾಣಿಸುತ್ತವೆ. ಆದರೆ ಒಂದು ಕ್ಷಣ ಯೋಚಿಸಿದರೆ, ಈ ದಿನದ ಮೂಲ ಅರ್ಥ ಅದಕ್ಕಿಂತ ತುಂಬಾ ದೊಡ್ಡದು. ಇದು ಕೇವಲ ಸಂಭ್ರಮದ ದಿನವಲ್ಲ; ಇದು ಹಕ್ಕುಗಳಿಗಾಗಿ ನಡೆದ ಹೋರಾಟದ ನೆನಪು.

20ನೇ ಶತಮಾನದ ಆರಂಭದಲ್ಲಿ ಮಹಿಳೆಯರು ಸಮಾನ ವೇತನ, ಉತ್ತಮ ಕೆಲಸದ ಪರಿಸ್ಥಿತಿ ಮತ್ತು ಮತದಾನದ ಹಕ್ಕಿಗಾಗಿ ರಸ್ತೆಗಿಳಿದಾಗಲೇ ಈ ದಿನದ ಕಥೆ ಆರಂಭವಾಯಿತು. 1908ರಲ್ಲಿ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಸಾವಿರಾರು ಮಹಿಳಾ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಅವರ ಬೇಡಿಕೆ ಸರಳವಾಗಿತ್ತು ನ್ಯಾಯ, ಗೌರವ ಮತ್ತು ಸಮಾನತೆ. ಈ ಹೋರಾಟಗಳು ನಂತರ ಜಾಗತಿಕ ಚಳವಳಿಯಾಗಿ ಬೆಳೆದವು.

1910ರಲ್ಲಿ ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ಸಮ್ಮೇಳನದಲ್ಲಿ ಜರ್ಮನ್ ಸಮಾಜವಾದಿ ನಾಯಕಿ ಕ್ಲಾರಾ ಜೆಟ್ಕಿನ್ ಮಹಿಳೆಯರ ಹಕ್ಕುಗಳನ್ನು ಗೌರವಿಸಲು ಒಂದು ವಿಶೇಷ ದಿನವನ್ನು ಆಚರಿಸಬೇಕೆಂದು ಪ್ರಸ್ತಾಪಿಸಿದರು. ನಂತರ ಹಲವು ದೇಶಗಳಲ್ಲಿ ಮಹಿಳಾ ಚಳವಳಿಗಳು ಗಟ್ಟಿಯಾಗುತ್ತಿದ್ದಂತೆ, ಮಾರ್ಚ್ 8 ಮಹಿಳಾ ಹೋರಾಟದ ಸಂಕೇತ ದಿನವಾಗಿ ರೂಪುಗೊಂಡಿತು. 1975ರಲ್ಲಿ ಸಂಯುಕ್ತ ರಾಷ್ಟ್ರ ಸಂಸ್ಥೆ ಅಧಿಕೃತವಾಗಿ ಈ ದಿನವನ್ನು ಅಂತಾರಾಷ್ಟ್ರೀಯ ಮಹಿಳಾ ದಿನವೆಂದು ಘೋಷಿಸಿತು.

ಹೀಗಾಗಿ ಮಾರ್ಚ್ 8 ಕೇವಲ ಶುಭಾಶಯಗಳ ದಿನವಲ್ಲ. ಅದು ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ನಡೆಸಿದ ಹೋರಾಟದ ನೆನಪು. ಸಮಾಜದಲ್ಲಿ ಸಮಾನ ಅವಕಾಶ, ಗೌರವ ಮತ್ತು ಸ್ವಾತಂತ್ರ್ಯಕ್ಕಾಗಿ ನಡೆದ ದೀರ್ಘ ಪಯಣದ ಪ್ರತೀಕ.

ಇಂದು ಮಹಿಳೆಯರು ಶಿಕ್ಷಣ, ಉದ್ಯೋಗ, ರಾಜಕೀಯ, ಕ್ರೀಡೆ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಆದರೂ ಸಮಾನತೆ ಇನ್ನೂ ಸಂಪೂರ್ಣವಾಗಿಲ್ಲ. ಹೀಗಾಗಿ ಮಹಿಳಾ ದಿನದ ನಿಜವಾದ ಅರ್ಥ, ಹೂವು ಕೊಡುವುದಲ್ಲ, ಮಹಿಳೆಯ ಧ್ವನಿಯನ್ನು ಕೇಳುವುದು, ಅವಳ ಹಕ್ಕುಗಳನ್ನು ಒಪ್ಪಿಕೊಳ್ಳುವುದು, ಅವಳ ಕನಸುಗಳಿಗೆ ಜಾಗ ಕೊಡುವುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !