Wednesday, November 5, 2025

ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ ಹರಾಜು: ಸಿಎಂ, ಡಿಸಿಎಂ ಡೆಡ್‌ಲೈನ್‌ಗೂ ಬೆಲೆ ಇಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಪ್ರಮುಖ ನಗರಗಳಲ್ಲಿ ಒಂದಾದ ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಮಾನ ಹರಾಜು ಮಾಡುವ ಹಂತ ತಲುಪಿದೆ. ಪ್ರತಿನಿತ್ಯ ರಸ್ತೆ ಗುಂಡಿಗಳಿಂದ ಸಂಭವಿಸುತ್ತಿರುವ ಅವಘಡಗಳು ಮತ್ತು ಸಾರ್ವಜನಿಕರ ಹಿಡಿಶಾಪದ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಸ್ತೆ ಗುಂಡಿಗಳನ್ನು ಮುಚ್ಚಲು ನವೆಂಬರ್ 3 ರ ಗಡುವು ನೀಡಿದ್ದರು.

ಆದರೆ, ಸಿಎಂ ಮತ್ತು ಡಿಸಿಎಂ ನೀಡಿದ್ದ ಗಡುವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿಲ್ಲ. ಗಡುವು ಮುಗಿದು ಹಲವು ದಿನಗಳೇ ಕಳೆದರೂ ರಸ್ತೆ ಗುಂಡಿಗಳ ಪರಿಸ್ಥಿತಿಯಲ್ಲಿ ಹೇಳಿಕೊಳ್ಳುವಂತಹ ಬದಲಾವಣೆಯಾಗಿಲ್ಲ. ಈ ಮೂಲಕ, ಆಡಳಿತ ಪಕ್ಷದ ನಾಯಕರ ಮಾತಿಗೆ ಪ್ರಾಧಿಕಾರ ಬೆಲೆ ನೀಡಿಲ್ಲ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ, ವಿರೋಧ ಪಕ್ಷವಾದ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಜನಾಂದೋಲನಕ್ಕೆ ಸಿದ್ಧವಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್ ಅವರು, “ಕಳೆದ ಎರಡೂವರೆ ವರ್ಷಗಳಲ್ಲಿ ಬೆಂಗಳೂರಿನ ರಸ್ತೆಗಳು ಸಂಪೂರ್ಣ ಅಧೋಗತಿಗೆ ತಲುಪಿವೆ. ಕಸದ ಸಮಸ್ಯೆ ಹೆಚ್ಚಾಗಿದೆ. ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿದ್ದು, ಹಣ ಬಿಡುಗಡೆಯಾಗಿಲ್ಲ. ಈ ಎಲ್ಲಾ ವೈಫಲ್ಯಗಳನ್ನು ಇಟ್ಟುಕೊಂಡು ಸಭೆ ನಡೆಸಿದ್ದೇವೆ,” ಎಂದು ಹೇಳಿದರು.

ಅಲ್ಲದೆ, “ಬೆಂಗಳೂರಿನ ಜನತೆಗೆ ದ್ರೋಹ ಬಗೆದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಂದೋಲನ ಕೈಗೊಳ್ಳುತ್ತೇವೆ,” ಎಂದ ಆರ್. ಅಶೋಕ್, ನವೆಂಬರ್ 7 ರಿಂದ 15 ರವರೆಗೆ ಒಂದು ವಾರಗಳ ಕಾಲ ರಸ್ತೆ ಗುಂಡಿಗಳನ್ನು ಸರಿಪಡಿಸಿ, ಅದಕ್ಕೆ ಸಂಬಂಧಿಸಿದಂತೆ ಜನರ ಸಹಿ ಸಂಗ್ರಹಣಾ ಚಳವಳಿಯನ್ನು ಹಮ್ಮಿಕೊಳ್ಳುವುದಾಗಿ ಘೋಷಿಸಿದರು.

error: Content is protected !!