ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026 ಹರಾಜು ಹತ್ತಿರವಾಗುತ್ತಿರುವ ನಡುವೆ ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ ಕ್ಯಾಮರೋನ್ ಗ್ರೀನ್ ಕುರಿತು ಹರಡಿದ್ದ ಗೊಂದಲಕ್ಕೆ ಇದೀಗ ತೆರೆ ಬಿದ್ದಿದೆ. ಹರಾಜು ಪಟ್ಟಿಯಲ್ಲಿ ತಮ್ಮ ಹೆಸರನ್ನು ಬ್ಯಾಟರ್ ಎಂದು ಮಾತ್ರ ಉಲ್ಲೇಖಿಸಿದ್ದರಿಂದ ಉಂಟಾದ ಚರ್ಚೆಗಳಿಗೆ ಗ್ರೀನ್ ಸ್ವತಃ ಸ್ಪಷ್ಟನೆ ನೀಡಿ, ತಾನು ಸಂಪೂರ್ಣ ಆಲ್‌ರೌಂಡರ್ ಆಗಿಯೇ ಕಣಕ್ಕಿಳಿಯಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಐಪಿಎಲ್ 2026 ಹರಾಜಿಗಾಗಿ ಆಯ್ಕೆಯಾಗಿರುವ 350 ಆಟಗಾರರ ಶಾರ್ಟ್‌ಲಿಸ್ಟ್‌ನಲ್ಲಿ ಗ್ರೀನ್ ಹೆಸರು ಬ್ಯಾಟರ್ ವಿಭಾಗದಲ್ಲಿ ಕಾಣಿಸಿಕೊಂಡಿತ್ತು. ಇದರಿಂದ ಈ ಬಾರಿ ಅವರು ಬೌಲಿಂಗ್ ಮಾಡಲಾರರೇ ಎಂಬ ಪ್ರಶ್ನೆಗಳು ಮೂಡಿದ್ದವು. ಈ ಕುರಿತು ಪ್ರತಿಕ್ರಿಯಿಸಿರುವ ಗ್ರೀನ್, ಇದು ಕೇವಲ ತಾಂತ್ರಿಕ ದೋಷ ಎಂದು ಹೇಳಿದ್ದಾರೆ. ತಮ್ಮ ಮ್ಯಾನೇಜರ್ ಹರಾಜು ನೋಂದಣಿ ವೇಳೆ ತಪ್ಪಾಗಿ ಬ್ಯಾಟರ್ ವಿಭಾಗವನ್ನು ಆಯ್ಕೆ ಮಾಡಿದ್ದರಿಂದ ಈ ಗೊಂದಲ ಸೃಷ್ಟಿಯಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಾನು ಈಗ ಸಂಪೂರ್ಣವಾಗಿ ಫಿಟ್ ಆಗಿದ್ದು, ಪ್ರತಿ ಪಂದ್ಯದಲ್ಲೂ ಬೌಲಿಂಗ್ ಮಾಡುವ ಶಕ್ತಿಯಿದೆ ಎಂದು ಗ್ರೀನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಂಬರುವ ಐಪಿಎಲ್‌ನಲ್ಲಿ ಆಲ್‌ರೌಂಡರ್ ಆಗಿ ತಂಡಕ್ಕೆ ಕೊಡುಗೆ ನೀಡುವುದೇ ತಮ್ಮ ಉದ್ದೇಶ ಎಂದು ಹೇಳಿದ್ದಾರೆ. ಗಾಯದ ಕಾರಣದಿಂದ ಐಪಿಎಲ್ 2025ನ್ನು ಕಳೆದುಕೊಂಡಿದ್ದ ಗ್ರೀನ್, ಮತ್ತೆ ಈ ಬಾರಿಯ ಟೂರ್ನಿಗೆ ಮರಳಲು ಸಜ್ಜಾಗಿದ್ದಾರೆ.
ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ ಅನುಭವ ಹೊಂದಿರುವ ಗ್ರೀನ್ ಮೇಲೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ವಿಶೇಷ ಗಮನ ಹರಿಸಿವೆ. ಆಲ್‌ರೌಂಡರ್ ಸ್ಥಾನ ಖಾಲಿಯಾಗಿರುವ ಹಿನ್ನೆಲೆ ಹರಾಜಿನಲ್ಲಿ ಗ್ರೀನ್‌ಗಾಗಿ ಭಾರೀ ಪೈಪೋಟಿ ನಡೆಯುವ ಸಾಧ್ಯತೆ ಇದೆ. ಅಂತಿಮವಾಗಿ ಅವರು ಯಾವ ತಂಡದ ಜೆರ್ಸಿ ಧರಿಸಲಿದ್ದಾರೆ ಎಂಬುದು ಡಿಸೆಂಬರ್ 16ರಂದು ತಿಳಿಯಲಿದೆ.

