ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಮೊದಲ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಭರ್ಜರಿ ಬ್ಯಾಟಿಂಗ್ ನಡೆಸಿದ್ದು, ನಾಯಕ ಇಶಾನ್ ಕಿಶನ್ ಬೊಂಬಾಟ್ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿ, ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಬಿಗ್ ಟಾರ್ಗೆಟ್ ನೀಡಿದೆ.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಆರ್ಸಿಬಿ ಪರ ಜೇಕಬ್ ಡಫಿ ಪವರ್ ಪ್ಲೇನಲ್ಲೇ ಮೂರು ವಿಕೆಟ್ ಪಡೆದು ಶಾಕ್ ನೀಡಿದರು. ಅಭಿಷೇಕ್ ಶರ್ಮಾ 7, ಟ್ರಾವಿಸ್ ಹೆಡ್ 11 ಹಾಗೂ ನಿತೀಶ್ ಕುಮಾರ್ ರೆಡ್ಡಿ ಯನ್ನು ಪೆವಿಲಿಯನ್ ಗೆ ಕಳುಹಿಸಿದರು.
ಬಳಿಕ ಒಂದಾದ ಇಶಾನ್ ಕಿಶನ್ ಹಾಗೂ ಹೆನ್ರಿಚ್ ಕ್ಲಾಸೆನ್ 97 ರನ್ಗಳಿಸಿದರು. ಕ್ಲಾಸೆನ್ 31 ರನ್ಗಳಿಸಿ ಸಾಲ್ಟ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು. ನಂತರ ಬಂದ ಸಲೀಲ್ ಅರೋರಾ 9 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಒಂದೆಡೆ ವಿಕೆಟ್ ಕಳೆದುಕೊಳ್ಳುತ್ತಿದ್ದರೆ ಮತ್ತೊಂದೆಡೆ ಭರ್ಜರಿ ಬ್ಯಾಟಿಂಗ್ ನಡೆಸಿದ ನಾಯಕ ಇಶಾನ್ ಕಿಶನ್ 38 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್ಗಳ ಸಹಿತ 80 ರನ್ಗಳಿಸಿದರು.
ಕೊನೆಯಲ್ಲಿ ಅನಿಕೇತ್ ವರ್ಮಾ 43 ರನ್ಗಳಿಸಿ ತಂಡದ ಮೊತ್ತವನ್ನ 200ರ ಗಡಿ ದಾಟಿಸಿದರು.
ಆರ್ಸಿಬಿ ಪರ ಜೇಕಬ್ ಡಫಿ 3, ರೊಮ್ಯಾರಿಯೋ ಶೆಫರ್ಡ್ 3, ಅಭಿನಂದನ್ ಸಿಂಗ್, ಸುಯಾಶ್ ಶರ್ಮಾ ಹಾಗೂ ಭುವನೇಶ್ವರ್ ಕುಮಾರ್ ತಲಾ ಒಂದು ವಿಕೆಟ್ ಪಡೆದರು.



