ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್ 19ರ ಹರಾಜು ಸಮೀಪಿಸುತ್ತಿರುವ ನಡುವೆ, ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಕೋಚಿಂಗ್ ವಿಭಾಗದಲ್ಲಿ ಪ್ರಮುಖ ಬದಲಾವಣೆ ಮಾಡಿಕೊಂಡಿದೆ. ಕಳೆದ ಸೀಸನ್‌ನಲ್ಲಿ ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್‌ರ ಬದಲು, ಶ್ರೀಲಂಕಾದ ಮಾಜಿ ಕ್ರಿಕೆಟಿಗ ಕುಮಾರ್ ಸಂಗಕ್ಕಾರರನ್ನು ಮತ್ತೆ ಹೆಡ್ ಕೋಚ್ ಹುದ್ದೆಗೆ ನೇಮಕ ಮಾಡಲಾಗಿದೆ. ಇದರಿಂದ ಸಂಗಕ್ಕಾರ ಡೈರೆಕ್ಟರ್ ಆಫ್ ಕ್ರಿಕೆಟ್ ಜವಾಬ್ದಾರಿಯ ಜೊತೆಯಲ್ಲೇ ಮುಖ್ಯ ಕೋಚ್ ಆಗಿಯೂ ಮುಂದಿನ ಸೀಸನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಂಗಕ್ಕಾರ 2021 ರಿಂದ 2024ರವರೆಗೆ ರಾಯಲ್ಸ್ ತಂಡದ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. ಬಳಿಕ ಅವರನ್ನು ತಂಡದ ನಿರ್ದೇಶಕರ ಪಟ್ಟಿಗೆ ಏರಿಸಲಾಗಿತ್ತು. ಇದೀಗ ಅವರನ್ನು ಮತ್ತೆ ಮುಖ್ಯ ಕೋಚ್ ಆಗಿ ನೇಮಕ ಮಾಡಿರುವುದು, ಮುಂದಿನ ಸೀಸನ್‌ಗೆ ತಂಡದ ತಂತ್ರ ಹಾಗೂ ದಿಕ್ಕು ಹೊಸ ರೂಪ ಪಡೆಯುತ್ತಿರುವುದನ್ನು ಸೂಚಿಸುತ್ತದೆ.
ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ರವೀಂದ್ರ ಜಡೇಜಾ, ಸ್ಯಾಮ್ ಕರನ್, ಶಿಮ್ರಾನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್ ಸೇರಿದಂತೆ ಹಲವಾರು ಪ್ರಮುಖ ಆಟಗಾರರು ಇದ್ದಾರೆ. ಜೊತೆಗೆ ಜೋಫ್ರಾ ಆರ್ಚರ್ ಮತ್ತು ನಾಂಡ್ರೆ ಬರ್ಗರ್‌ರಂತಹ ವಿದೇಶಿ ಆಟಗಾರರೂ ಇದ್ದಾರೆ.
ಇನ್ನು ರಾಯಲ್ಸ್ ತಂಡವು ಸಂಜು ಸ್ಯಾಮ್ಸನ್ ಮತ್ತು ನಿತೀಶ್ ರಾಣಾ ಸೇರಿದಂತೆ ವನಿಂದು ಹಸರಂಗ, ಮಹೇಶ್ ತೀಕ್ಷಣ ಸೇರಿದಂತೆ ಹಲವು ಆಟಗಾರರನ್ನು ರಿಲೀಸ್ ಮಾಡಿದೆ. ಈ ಬದಲಾವಣೆಗಳೊಂದಿಗೆ, ಇನ್ನುಮುಂದೆ ನಡೆಯಲಿರುವ ಮಿನಿ-ಹರಾಜಿನಲ್ಲಿ ತಂಡ ಏನೆಲ್ಲಾ ಹೊಸ ಸಂಯೋಜನೆ ಮಾಡುತ್ತದೆ ಎಂಬ ಕುತೂಹಲ ಹೆಚ್ಚಿದೆ.

