Saturday, October 18, 2025

ಐಪಿಎಲ್ ಬ್ರ್ಯಾಂಡ್ ಮೌಲ್ಯ ಕುಸಿತ: ಆದ್ರೆ ನಮ್ಮ RCB ವ್ಯಾಲ್ಯೂ ಕಡಿಮೆಯಾಗೋಕೆ ಸಾಧ್ಯನಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಕ್ರಿಕೆಟ್ ಪ್ರೇಮಿಗಳಿಗೆ ಹತ್ತಿರವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಈ ಬಾರಿ ಮೊದಲ ಬಾರಿ ತನ್ನ ಇಕೊಸಿಸ್ಟಂ ಮೌಲ್ಯದಲ್ಲಿ ಕುಸಿತವನ್ನು ಅನುಭವಿಸಿದೆ. 2008 ರಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಾರಂಭಿಸಿದ್ದ ಐಪಿಎಲ್, ಆರಂಭದಲ್ಲಿ 19,500 ಕೋಟಿ ರೂ. ಮೌಲ್ಯ ಹೊಂದಿದ್ದು, 2024 ರ ವೇಳೆಗೆ 82,700 ಕೋಟಿ ರೂ. ಮೌಲ್ಯವನ್ನು ತಲುಪಿತ್ತು. ಆದರೆ ಅಕ್ಟೋಬರ್ 15 ರಂದು ಬಿಡುಗಡೆಯಾದ D&P ಸಲಹಾ ಸಂಸ್ಥೆಯ ವರದಿ ಪ್ರಕಾರ, ಐಪಿಎಲ್ ಇಕೊಸಿಸ್ಟಂ ಮೌಲ್ಯವು 76,100 ಕೋಟಿ ರೂ.ಗೆ ಇಳಿದಿದೆ. ಇದರಿಂದ ಒಂದೇ ವರ್ಷದಲ್ಲಿ 6,600 ಕೋಟಿ ರೂ. ಕುಸಿತ ಕಂಡುಬಂದಿದೆ.

ಈ ಕುಸಿತಕ್ಕೆ ಪ್ರಮುಖ ಕಾರಣಗಳಾಗಿ ಆನ್‌ಲೈನ್ ಗೇಮಿಂಗ್ ಬಿಲ್ 2025 ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ, ಜಿಯೋಸಿನಿಮಾ-ಡಿಸ್ನಿ+ ಹಾಟ್‌ಸ್ಟಾರ್ ವಿಲೀನ, ಪ್ರಸಾರ ಹಕ್ಕುಗಳ ಹರಾಜಿನಲ್ಲಿ ಸ್ಪರ್ಧೆಯಲ್ಲಿ ಕುಸಿತ ಸೇರಿದಂತೆ ಹಲವು ಅಂಶಗಳನ್ನು ವರದಿ ಉಲ್ಲೇಖಿಸಿದೆ. ವಿಶೇಷವಾಗಿ, ಆನ್‌ಲೈನ್ ಗೇಮಿಂಗ್ ಬಿಲ್‌ನಿಂದಾಗಿ ಐಪಿಎಲ್ ವಾರ್ಷಿಕ ಜಾಹೀರಾತು ಮತ್ತು ಪ್ರಾಯೋಜಕತ್ವದ ಆದಾಯದಲ್ಲಿ 1,500–2,000 ಕೋಟಿ ರೂ. ನಷ್ಟವಾಗಿದೆ.

ಇನ್ನೊಂದೆಡೆ, ಐಪಿಎಲ್ ಮೌಲ್ಯ ಕುಸಿತದ ನಡುವೆಯೂ ಫ್ರಾಂಚೈಸಿ ತಂಡಗಳಲ್ಲಿನ ಬ್ರ್ಯಾಂಡ್ ಮೌಲ್ಯಗಳಲ್ಲಿ ಭಿನ್ನತೆ ಕಂಡುಬಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತನ್ನ ಬ್ರ್ಯಾಂಡ್ ಮೌಲ್ಯವನ್ನು $227 ಮಿಲಿಯನ್‌ನಿಂದ $269 ಮಿಲಿಯನ್‌ಗೆ ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ($235 ಮಿಲಿಯನ್) ಮತ್ತು ಮುಂಬೈ ಇಂಡಿಯನ್ಸ್ ($242 ಮಿಲಿಯನ್) ಅನ್ನು ಹಿಂದಿಕ್ಕಿದೆ.

ಹಾಗೆಯೇ, ಈ ಬಾರಿ ಐಪಿಎಲ್ ರನ್ನರ್ ಅಪ್ ಆಗಿ ಹೊರಹೊಮ್ಮಿದ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ತನ್ನ ಬ್ರ್ಯಾಂಡ್ ಮೌಲ್ಯವನ್ನು 39.6% ಹೆಚ್ಚಿಸಿಕೊಂಡು $141 ಮಿಲಿಯನ್‌ಕ್ಕೆ ತಲುಪಿಸಿದೆ. ಈ ಬೆಳವಣಿಗೆಯಿಂದ ಸ್ಪರ್ಧಾತ್ಮಕ ತಂಡಗಳ ನಡುವಣ ಶ್ರೇಯಾಂಕದಲ್ಲಿ ಹೊಸ ಬದಲಾವಣೆ ಕಂಡುಬಂದಿದೆ.

error: Content is protected !!