March 21, 2026
Saturday, March 21, 2026
spot_img

ಸೌದಿ, ಬಹರೇನ್‌, ಕತಾರ್‌ ನಲ್ಲಿರುವ ಯುಎಸ್ ನೌಕಾ ನೆಲೆಗಳ ಮೇಲೆ ಇರಾನ್‌ ಕ್ಷಿಪಣಿ ದಾಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್ ರಾಜಧಾನಿ ಟೆಹರಾನ್​ ನಗರದ ಮೇಲೆ ಇಸ್ರೇಲ್​​ ಸೇನೆ ಕ್ಷಿಪಣಿ ದಾಳಿ ನಡೆಸಿದ್ದು, ಇದರ ಬೆನ್ನಲ್ಲೆ ಪ್ರತಿಯಾಗಿ ಇರಾನ್ ಇಡೀ ಗಲ್ಫ್ ವಲಯದ ಮೇಲೆ ತನ್ನ ಕ್ಷಿಪಣಿಗಳನ್ನು ಪ್ರಯೋಗಿಸಿದೆ.

ಸೌದಿ ಅರೇಬಿಯಾ, ಯುಎಇ ಮತ್ತು ಕತಾರ್‌ನಲ್ಲಿ ಭೀಕರ ಸ್ಫೋಟಗಳು ಸಂಭವಿಸುತ್ತಿವೆ. ಸೌದಿ ಅರೇಬಿಯಾ ರಾಜಧಾನಿ ರಿಯಾದ್‌, ಬಹರನ್‌ ರಾಜಧಾನಿ ಮನಾಮಾ ಹಾಗೂ ಕತಾರ್‌ ರಾಜಧಾನಿ ದೋಹಾದಲ್ಲೂ ಸ್ಫೋಟದ ಸದ್ದು ಕೇಳಿಬಂದಿದ್ದು, ಇದು ತಾನೇ ನಡೆಸಿರುವ ದಾಳಿ ಎಂದು ಇರಾನ್‌ ಹೇಳಿಕೊಂಡಿದೆ.

ಇರಾನ್ ನಾನಾ ದೇಶಗಳಲ್ಲಿ ಇರುವ ಯುಎಸ್​ ವಾಯುನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸತೊಡಗಿದೆ. ಇರಾನ್‌ ಮಿಸೈಲ್‌ ದಾಳಿಯ ಬಳಿಕ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದು, ಅಂತಾರಾಷ್ಟ್ರೀಯ ಕಡಲ ಭದ್ರತೆ ಬಗ್ಗೆ ಕಳವಳ ಮೂಡಿಸಿದೆ.

ಅಬುಧಾಬಿ ಮಾತ್ರವಲ್ಲದೆ ಈಗ ಪ್ರವಾಸಿಗರ ಸ್ವರ್ಗ ದುಬೈನಲ್ಲೂ ಸರಣಿ ಸ್ಫೋಟಗಳ ವರದಿಯಾಗುತ್ತಿವೆ. ಅಬುಧಾಬಿಯ ವಾಯುಪ್ರದೇಶವನ್ನು ಈಗಾಗಲೇ ಬಂದ್ ಮಾಡಲಾಗಿದೆ. ರಾಜಧಾನಿ ಮನಮಾದಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯ ಬೆನ್ನಲ್ಲೇ ಮತ್ತೊಂದು ಭೀಕರ ಸ್ಫೋಟದ ಸದ್ದು ಕೇಳಿಬಂದಿದೆ.

ಇರಾನ್‌ನಿಂದ ಹಾರಿಸಲಾದ ಹಲವಾರು ಕ್ಷಿಪಣಿಗಳನ್ನು ತಡೆಹಿಡಿದ ನಂತರ, ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಾಜಧಾನಿ ಅಬುಧಾಬಿಯಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ದೇಶದ ರಾಜ್ಯ ಸುದ್ದಿ ಸಂಸ್ಥೆ ತಿಳಿಸಿದೆ. ಈ ದಾಳಿಯು ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಯುಎಇ ಹೇಳಿದೆ.

ಕತಾರ್ ರಾಜಧಾನಿ ದೋಹಾದಲ್ಲಿ ಹಲವು ಸ್ಫೋಟದ ಸದ್ದುಗಳು ಕೇಳಿಬಂದಿವೆ. ಆದರೆ, ಇರಾನ್‌ನಿಂದ ಬಂದ ಎಲ್ಲಾ ಕ್ಷಿಪಣಿಗಳನ್ನು ತನ್ನ ರಕ್ಷಣಾ ವ್ಯವಸ್ಥೆಯ ಮೂಲಕ ಯಶಸ್ವಿಯಾಗಿ ಹೊಡೆದುರುಳಿಸಿರುವುದಾಗಿ ಕತಾರ್ ರಕ್ಷಣಾ ಸಚಿವಾಲಯ ತಿಳಿಸಿದೆ.

ಟರ್ಕಿಶ್ ಏರ್ಲೈನ್ಸ್ ಮಾರ್ಚ್ 2 ರವರೆಗೆ ಲೆಬನಾನ್, ಸಿರಿಯಾ, ಇರಾಕ್, ಇರಾನ್ ಮತ್ತು ಜೋರ್ಡಾನ್ ಗೆ ವಿಮಾನಗಳನ್ನು ರದ್ದುಗೊಳಿಸಿರವುದಾಗಿ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !