ಹೊಸದಿಗಂತ ಡಿಜಿಟಲ್ ಡೆಸ್ಕ್;
ಇರಾನ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಠಿಣ ನಿಲುವು ತಳೆದಿರುವ ಇರಾನ್ ಸರ್ಕಾರ ಮುಂಚೂಣಿ ಪ್ರತಿಭಟನಾಕಾರನ ಗಲ್ಲಿಗೇರಿಸಲು ನಿರ್ಧರಿಸಿದೆ.
ಪ್ರತಿಭಟನಾಕಾರರ ಮೇಲೆ ನಡೆಯುತ್ತಿರುವ ದೌರ್ಜನ್ಯದ ನಡುವೆಯೇ ಇರಾನ್ ಪ್ರತಿಭಟನಾಕಾರನನ್ನು ಗಲ್ಲಿಗೇರಿಸಲು ಸಜ್ಜಾಗಿದೆ. ಮೂಲಗಳ ಪ್ರಕಾರ ಇರಾನ್‌ನಲ್ಲಿ 26 ವರ್ಷದ ಪ್ರತಿಭಟನಾಕಾರ ಎರ್ಫಾನ್ ಸುಲ್ತಾನಿಯನ್ನು ಗಲ್ಲಿಗೇರಿಸಲು ನಿರ್ಧರಿಸಲಾಗಿದೆ.
ಎರ್ಫಾನ್ ಸುಲ್ತಾನಿ ಇರಾನ್ ನ ಖಮೇನಿ ಸರ್ಕಾರದ ವಿರುದ್ಧದ ದಂಗೆಯ ಮೂಲ ಕಾರಣನಾಗಿದ್ದ. ಇದೀಗ ಮರಣದಂಡನೆ ಶಿಕ್ಷೆಯನ್ನು ಎದುರಿಸುತ್ತಿದ್ದಾನೆ. ಈ ಕುರಿತು ವರದಿ ಮಾಡಿರುವ ದಿ ಗಾರ್ಡಿಯನ್ ಪ್ರಕಾರ, ಸುಲ್ತಾನಿಯನ್ನು ಜನವರಿ 8 ರಂದು ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಕ್ಕಾಗಿ ಬಂಧಿಸಲಾಗಿದೆ.
ನಂತರ ಜನವರಿ 11 ರಂದು ನ್ಯಾಯಾಲಯದ ವಿಚಾರಣೆಯ ನಂತರ ಇರಾನ್ ಅಧಿಕಾರಿಗಳು ಆತನಿಗೆ ಮರಣದಂಡನೆ ವಿಧಿಸಿದ್ದರು. ಅಂದರೆ “ಅಲ್ಲಾಹನ ವಿರುದ್ಧ ಯುದ್ಧ ಮಾಡುವುದು” ಎಂಬ ಅರ್ಥವನ್ನು ನೀಡುವ ಮೊಹರೆಬೆಹ್ ಆರೋಪದ ಮೇಲೆ ಆತನನ್ನು ಗಲ್ಲಿಗೇರಿಸಲು ನಿರ್ಧರಿಸಲಾಗಿದೆ.
ಇನ್ನು ಸುಲ್ತಾನಿಗೆ ನ್ಯಾಯಯುತ ವಿಚಾರಣೆ ಮತ್ತು ಕಾನೂನು ನೆರವು ನಿರಾಕರಿಸಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ. ಸುಲ್ತಾನಿ ಅವರ ಕುಟುಂಬದ ಪ್ರಕಾರ, ಅವರನ್ನು ಗಲ್ಲಿಗೇರಿಸುವ ಮೊದಲು ಅವರಿಗೆ ಕೇವಲ 10 ನಿಮಿಷಗಳ ಅಂತಿಮ ಸಭೆಗೆ ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಸುಲ್ತಾನಿ ಗಲ್ಲು ಶಿಕ್ಷೆ ವಿಚಾರದಲ್ಲಿ ಜಾಗತಿಕ ಸಮುದಾಯ ಮಧ್ಯಪ್ರವೇಶಿಸಬೇಕು ಎಂದು ಇರಾನ್ ಮಾನವ ಹಕ್ಕುಗಳು (IHR) ಮತ್ತು ಇರಾನ್‌ನಲ್ಲಿನ ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟ (NUFD) NGO ಗುಂಪುಗಳು ಆಗ್ರಹಿಸಿವೆ.
ಆ ವ್ಯಕ್ತಿಯ”ಏಕೈಕ ಅಪರಾಧ ಇರಾನ್‌ಗೆ ಸ್ವಾತಂತ್ರ್ಯಕ್ಕಾಗಿ ಕರೆ ನೀಡುವುದು ಎಂದು NUFD ವರದಿ ಮಾಡಿದೆ. ಸೊಲ್ತಾನಿಯ ಗಲ್ಲಿಗೇರಿಸುವಿಕೆಯನ್ನು ತಡೆಯಲು NUFD ಅಂತಾರಾಷ್ಟ್ರೀಯ ಬೆಂಬಲವನ್ನು ಸಹ ಕೋರುತ್ತಿದೆ.


