ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಮತ್ತು ಇಸ್ರೇಲ್ ಸಂಯುಕ್ತವಾಗಿ ನಡೆಸಿದ ವೈಮಾನಿಕ ದಾಳಿಯ ಬಳಿಕ ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರ ಆರೋಗ್ಯದ ಬಗ್ಗೆ ಹೊಸ ಮಾಹಿತಿ ಹೊರಬಿದ್ದಿದೆ. ರಾಯಿಟರ್ಸ್ ವರದಿ ಪ್ರಕಾರ, ದಾಳಿಯಲ್ಲಿ ಮುಖ ಹಾಗೂ ಕಾಲಿಗೆ ತೀವ್ರ ಗಾಯಗಳಾದ ಬಳಿಕ ಅವರು ಇನ್ನೂ ಚೇತರಿಸಿಕೊಳ್ಳುತ್ತಿರುವ ಹಂತದಲ್ಲಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಟೆಹ್ರಾನ್‌ನ ಮಧ್ಯಭಾಗದಲ್ಲಿರುವ ಸರ್ವೋಚ್ಚ ನಾಯಕನ ನಿವಾಸದ ಮೇಲೆ ನಡೆದ ದಾಳಿಯಲ್ಲಿ ಖಮೇನಿ ಅವರ ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಒಂದು ಅಥವಾ ಎರಡೂ ಕಾಲುಗಳಿಗೆ ಗಮನಾರ್ಹ ಹಾನಿಯಾಗಿದೆ ಎನ್ನಲಾಗಿದೆ. ಕೆಲವು ವರದಿಗಳಲ್ಲಿ ಒಂದು ಕಾಲು ಕಳೆದುಕೊಂಡಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ.
ಇದನ್ನೂ ಓದಿ:
56 ವರ್ಷದ ಮೊಜ್ತಬಾ ಖಮೇನಿ ದೈಹಿಕವಾಗಿ ಚಿಕಿತ್ಸೆ ಪಡೆಯುತ್ತಿದ್ದರೂ, ಮಾನಸಿಕವಾಗಿ ಚುರುಕಾಗಿದ್ದಾರೆ ಎಂದು ಅವರ ಆಪ್ತ ವಲಯದ ಮೂಲಗಳು ಹೇಳಿವೆ. ಅವರು ಪ್ರಸ್ತುತ ಆಡಿಯೋ ಕಾನ್ಫರೆನ್ಸ್ ಮೂಲಕ ಹಿರಿಯ ಅಧಿಕಾರಿಗಳೊಂದಿಗೆ ಸಭೆಗಳಲ್ಲಿ ಭಾಗವಹಿಸುತ್ತಿದ್ದು, ಅಮೆರಿಕದೊಂದಿಗೆ ನಡೆಯಲಿರುವ ಶಾಂತಿ ಮಾತುಕತೆ ಸೇರಿದಂತೆ ಪ್ರಮುಖ ವಿಚಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮಾರ್ಚ್ 8ರಂದು ತಮ್ಮ ತಂದೆ ಅಯತೊಲ್ಲಾ ಅಲಿ ಖಮೇನಿ ಅವರ ಸಾವಿನ ಬಳಿಕ ಅವರು ಹೊಸ ಸರ್ವೋಚ್ಚ ನಾಯಕರಾಗಿ ನೇಮಕಗೊಂಡಿದ್ದರು. ಆದರೆ ನೇಮಕವಾದ ನಂತರ ಅವರ ಯಾವುದೇ ಫೋಟೋ, ವಿಡಿಯೋ ಅಥವಾ ಸಾರ್ವಜನಿಕ ಭಾಷಣ ಹೊರಬಂದಿಲ್ಲ. ಇದರಿಂದ ಅವರ ಆರೋಗ್ಯ ಹಾಗೂ ಆಡಳಿತ ಸಾಮರ್ಥ್ಯದ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಿವೆ.
ಈ ನಡುವೆ ಇರಾನ್ ಸರ್ಕಾರದಿಂದ ಅಧಿಕೃತ ವೈದ್ಯಕೀಯ ಮಾಹಿತಿ ಇನ್ನೂ ಪ್ರಕಟವಾಗಿಲ್ಲ ಎಂಬುದು ಗಮನಾರ್ಹ.



