ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು ನಗರದ ಹೊರವಲಯ, ಉಳ್ಳಾಲ ತಾಲೂಕಿನ ಕುತ್ತಾರು ಪದವಿನ ಸಲಾತ್ ನಗರ ಎಂಬಲ್ಲಿ ಹೊಸ ಬಾವಿ ಕೊರೆಯುವ ಕಾಮಗಾರಿ ನಡೆಸುತ್ತಿದ್ದ ವೇಳೆ ಕ್ರೇನ್ನ ಕೊಕ್ಕೆಯಿಂದ ಬೇರ್ಪಟ್ಟ ಮಣ್ಣು ತುಂಬಿದ್ದ ಕಬ್ಬಿಣದ ಬಕೆಟ್ ಮೂವತ್ತು ಅಡಿ ಎತ್ತರದಿಂದ ತಲೆಯ ಮೇಲೆ ಬಿದ್ದು ವಲಸೆ ಕಾರ್ಮಿಕರೋರ್ವರು ದಾರುಣವಾಗಿ ಮೃತಪಟ್ಟಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಮಲ್ಲಾಪುರ ನಿವಾಸಿ ಶಿವಕುಮಾರ ಜಿ.ಕೆ (30)ಮೃತ ವ್ಯಕ್ತಿ.
ಇಲ್ಲಿನ ಖಾಲಿ ಸೈಟೊಂದರಲ್ಲಿ ಹೊಸ ಬಾವಿ ಅಗೆಯುವ ಕೆಲಸ ನಡೆಯುತ್ತಿತ್ತು. ಸಂಜೆ 4.30 ರ ವೇಳೆಗೆ ದುರ್ಘಟನೆ ನಡೆದಿದೆ.ಒಟ್ಟು ಆರು ಜನ ಕೂಲಿ ಕಾರ್ಮಿಕರಲ್ಲಿ, ಶಿವಕುಮಾರ್ ಸೇರಿ ಮೂವರು ಕಾರ್ಮಿಕರು ಮೂವತ್ತು ಅಡಿ ಆಳ ಕೊರೆಯಲಾದ ಬಾವಿಯೊಳಗಡೆ ಕೆಲಸ ನಿರ್ವಹಿಸುತ್ತಿದ್ದರು.ಈ ವೇಳೆ ಕ್ರೇನ್ ಮೂಲಕ ಕಬ್ಬಿಣದ ಬಕೆಟಲ್ಲಿ ಮಣ್ಣನ್ನು ಮೇಲಕ್ಕೆತ್ತುತ್ತಿದ್ದ ಸಂಧರ್ಭ ಕ್ರೇನಿನ ಕೊಕ್ಕೆಯಿಂದ ಬೇರ್ಪಟ್ಟ ಮಣ್ಣು ತುಂಬಿದ ಕಬ್ಬಿಣದ ಬಕೆಟ್ ನೇರವಾಗಿ ಕಾರ್ಮಿಕ ಶಿವ ಕುಮಾರ್ ಅವರ ತಲೆ ಮೇಲೆ ಬಿದ್ದಿದೆ. ಗಂಭೀರ ಗಾಯಗೊಂಡಿದ್ದ ಶಿವಕುಮಾರನನ್ನು ಮೇಲಕ್ಕೆತ್ತಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾದರೂ ದಾರಿ ಮಧ್ಯದಲ್ಲಿಯೇ ಅವರು ಮೃತಪಟ್ಟಿದ್ದಾರೆ.

ಬಾವಿಯೊಳಗಿದ್ದ ಇತರ ಇಬ್ಬರು ಕಾರ್ಮಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಿವಕುಮಾರ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾಣಿಸಲಾಗಿದೆ.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಮೃತ ಶಿವಕುಮಾರ್ ವಿವಾಹಿತರಾಗಿದ್ದು ತನ್ನ ಪತ್ನಿ ಮತ್ತು ಮೂರು ವರ್ಷದ ಗಂಡು ಮತ್ತು ಒಂದು ವರ್ಷದ ಹೆಣ್ಣು ಮಗಳೊಂದಿಗೆ ತೊಕ್ಕೊಟ್ಟುವಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.ನಿನ್ನೆಯಷ್ಟೆ ಪತ್ನಿ ಮತ್ತು ಮಕ್ಕಳನ್ನ ಅವರು ಊರಿಗೆ ಕಳುಹಿಸಿ ಕೊಟ್ಟಿದ್ದರಂತೆ.ಶಿವಕುಮಾರ್ ಅವರು ಎರಡು ವಾರಗಳ ಹಿಂದಷ್ಟೆ ತನ್ನ ಕಿರಿಯ ಮಗಳ ಮೊದಲನೆಯ ಹುಟ್ಟಿದ ಹಬ್ಬವನ್ನ ಸಂಭ್ರಮದಿಂದ ಆಚರಿಸಿದ್ದರು.



