Wednesday, November 5, 2025

ಗಂಟೆಗೆ 20 ವೋಟ್‌ ಹಾಕೋದು ಸಾಧ್ಯನಾ?: ‘ವೋಟ್‌ ಚೋರಿ’ ಆರೋಪಕ್ಕೆ ಬಿಜೆಪಿಯಿಂದ ‘ಪ್ರಶ್ನಾವಳಿ’ ಟಾಂಗ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹರಿಯಾಣದಲ್ಲಿ ‘ದೊಡ್ಡ ಪ್ರಮಾಣದ ಮತದಾರರ ವಂಚನೆ’ ನಡೆದಿದೆ ಎಂಬ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರ ಆರೋಪವನ್ನು ಬಿಜೆಪಿ ತೀವ್ರವಾಗಿ ವ್ಯಂಗ್ಯ ಮಾಡಿದೆ. “ಯಾರಾದರೂ ಗಂಟೆಗೆ 20 ವೋಟ್‌ಗಳನ್ನು ಹಾಕಲು ಸಾಧ್ಯವಾ?” ಎಂದು ಪ್ರಶ್ನಿಸುವ ಮೂಲಕ ಬಿಜೆಪಿಯು ರಾಹುಲ್‌ ಗಾಂಧಿಯವರ ಹೇಳಿಕೆಯನ್ನು ಅಣಕಿಸಿದೆ.

ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ ಅವರು, ಹರಿಯಾಣದಲ್ಲಿ ಮತ ವಂಚನೆ ನಡೆದಿದೆ ಮತ್ತು ಇದು “ಭಾರತದ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಅಪಖ್ಯಾತಿಗೊಳಿಸುವ ಪ್ರಯತ್ನ” ಎಂದು ಗಂಭೀರ ಆರೋಪ ಮಾಡಿದ್ದರು.

ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು ಅವರು, ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್, ಭಾರತ ವಿರೋಧಿ ಶಕ್ತಿಗಳೊಂದಿಗೆ ಸೇರಿಕೊಂಡು, ಭಾರತೀಯ ಚುನಾವಣಾ ಆಯೋಗ (ಇಸಿಐ), ನ್ಯಾಯಾಂಗ ಮತ್ತು ಸಶಸ್ತ್ರ ಪಡೆಗಳ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಹಾಳು ಮಾಡುತ್ತಿದ್ದಾರೆ” ಎಂದು ಅವರು ಆರೋಪಿಸಿದರು.

ಚುನಾವಣಾ ಸೋಲುಗಳನ್ನು ಒಪ್ಪಿಕೊಳ್ಳುವ ಬದಲು ಕಾಂಗ್ರೆಸ್ ಪಕ್ಷವು ಇವಿಎಂಗಳು ಮತ್ತು ಇಸಿಐ ಅನ್ನು ದೂಷಿಸುವ ಒಂದು ‘ಪ್ರವೃತ್ತಿ’ಯನ್ನು ಬೆಳೆಸಿಕೊಂಡಿದೆ. ರಾಹುಲ್‌ ಗಾಂಧಿ ತಮ್ಮ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ರಿಜಿಜು ಟೀಕಿಸಿದರು.

ಮತದಾರರ ಪಟ್ಟಿ ಕುರಿತು ಮಾತನಾಡಿದ ಅವರು, “ಪ್ರತಿಯೊಂದು ರಾಜಕೀಯ ಪಕ್ಷವೂ ಚುನಾವಣೆಗೆ ಮೊದಲು ಮತದಾರರ ಪಟ್ಟಿಯ ಪ್ರತಿಗಳನ್ನು ಸ್ವೀಕರಿಸುತ್ತದೆ. ಆಗಲೇ ವ್ಯತ್ಯಾಸಗಳನ್ನು ಗುರುತಿಸಬಹುದು. ಯಾವುದೇ ತಪ್ಪು ಇದ್ದಲ್ಲಿ ಅಥವಾ ಅಧಿಕಾರಿಯೊಬ್ಬರು ತಪ್ಪು ಮಾಡಿದರೆ, ನಾವು ನ್ಯಾಯಾಲಯಗಳನ್ನು ಸಂಪರ್ಕಿಸಬಹುದು” ಎಂದು ತಿಳಿಸಿದರು.

error: Content is protected !!