ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ತಮ್ಮ ಭಾಷಣವನ್ನು ಕೇವಲ ಐದು ನಿಮಿಷಕ್ಕೆ ಮೊಟಕುಗೊಳಿಸಿ ನಿರ್ಗಮಿಸಿರುವ ಕ್ರಮಕ್ಕೆ ಸಚಿವ ರಾಮಲಿಂಗಾ ರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರವು ರಾಜ್ಯಪಾಲರನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದೆ ಎಂದು ಅವರು ನೇರವಾಗಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, “ಸ್ವಾತಂತ್ರ್ಯ ಬಂದಾಗಿನಿಂದಲೂ ರಾಜ್ಯ ಸರ್ಕಾರ ಸಿದ್ಧಪಡಿಸಿಕೊಟ್ಟ ಭಾಷಣವನ್ನೇ ರಾಜ್ಯಪಾಲರು ಓದುವುದು ಸಂಪ್ರದಾಯ. ಆದರೆ ಇಂದು ಕೇವಲ 5 ನಿಮಿಷ ಓದಿ ಹೋಗಿರುವುದು ಗೊಂದಲ ಮೂಡಿಸಿದೆ. ರಾಜ್ಯಪಾಲರು ಸಂವಿಧಾನಕ್ಕಿಂತ ದೊಡ್ಡವರಲ್ಲ, ಅವರು ಕಾನೂನಿನ ಚೌಕಟ್ಟಿನಲ್ಲೇ ಕೆಲಸ ಮಾಡಬೇಕು,” ಎಂದು ಎಚ್ಚರಿಸಿದರು.
“ಕೇಂದ್ರ ಸರ್ಕಾರವು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದೆ. ರಾಜ್ಯಪಾಲರು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಬಿಜೆಪಿ ಬಿಡುತ್ತಿಲ್ಲ. ಕೇಂದ್ರದ ತಾಳಕ್ಕೆ ತಕ್ಕಂತೆ ರಾಜ್ಯ ಬಿಜೆಪಿಯವರೂ ಕುಣಿಯುತ್ತಿದ್ದಾರೆ. ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೂ ಇವರು ಧ್ವನಿ ಎತ್ತುತ್ತಿಲ್ಲ,” ಎಂದು ಕಿಡಿಕಾರಿದರು.


