Friday, November 14, 2025

Doctors special | ಋತುಚಕ್ರದ ಸಮಯದಲ್ಲಿ ವಿಶ್ರಾಂತಿ ಮಾತ್ರ ಸಾಕೇ? ವೈದ್ಯರ ಸಲಹೆ ಏನು?

ಋತುಚಕ್ರದ ಸಮಯದಲ್ಲಿ ಕೆಲಸ ಮಾಡೋದಕ್ಕೆ ಆಫೀಸ್‌ಗೆ ಹೋಗೋದಾ? ಅಥವಾ ರಜೆ ಹಾಕಿ ಮನೆಯಲ್ಲೇ ರೆಸ್ಟ್‌ ಮಾಡೋದಾ? ಇದು ಹೆಣ್ಣುಮಕ್ಕಳ ಪ್ರತೀ ತಿಂಗಳ ಪ್ರಶ್ನೆ!

ಈ ಸಮಯದಲ್ಲಿ ಮಹಿಳೆಯರಿಗೆ ವಿಶ್ರಾಂತಿ ಅಗತ್ಯವಿದೆಯೇ? ಅಥವಾ ವಿಶ್ರಾಂತಿ ಇಲ್ಲದಂತೆಯೇ ಎಂದಿನಂತೆ ಇರಬಹುದಾ ಎನ್ನುವ ಪ್ರಶ್ನೆ ಜನರಲ್ಲಿದೆ.

ಈ ಪ್ರಶ್ನೆಗೆ ಮಂಗಳೂರಿನ ಡಾ. ಬಿ ಆರ್‌. ಅಂಬೇಡ್ಕರ್ ವೃತ್ತದ ಬಳಿಯ ಕೆಎಂಸಿ ಆಸ್ಪತ್ರೆಯ ಕನ್ಸಲ್ಟೆಂಟ್‌ ಒಬಿಜಿ ವೈದ್ಯರಾದ ವಿದ್ಯಾಶ್ರೀ ಕಾಮತ್‌‌ ಉತ್ತರ ನೀಡಿದ್ದಾರೆ. ಮಹಿಳೆಯರಿಗೆ ವಿಶ್ರಾಂತಿ ಬೇಕಾ? ಬೇಕಿದ್ದಲ್ಲಿ ಎಷ್ಟು ಬೇಕು? ಹೇಗೆ ಬೇಕು ಎಲ್ಲ ಮಾಹಿತಿ ಇಲ್ಲಿದೆ..

ಪೀರಿಯಡ್ಸ್‌ ಸಮಯದಲ್ಲಿ ಆರಾಮದ ಅಗತ್ಯವಿರುವುದು ನಿಜ ಆದರೆ ಎಷ್ಟು ಪ್ರಮಾಣದಲ್ಲಿ ಅಗತ್ಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಈ ಸಮಯದಲ್ಲಿ ದೇಹ ಸಾಕಷ್ಟು ಬದಲಾವಣೆಗೆ ಒಳಗಾಗುವ ಕಾರಣ ಮಹಿಳೆಯರ ದೇಹ ಸ್ಥಿತಿಗೆ ಅನುಗುಣವಾಗಿ ಆರಾಮದ ಅಗತ್ಯವಿದೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ವೈದ್ಯರು ಸಾಮಾನ್ಯವಾಗಿ ಸಂಪೂರ್ಣ ವಿಶ್ರಾಂತಿಯ ಸಲಹೆಯನ್ನು ನೀಡುವುದಿಲ್ಲ. ಲಘು ಚಟುವಟಿಕೆ ಮತ್ತು ವಿಶ್ರಾಂತಿಯನ್ನು ಸಮವಾಗಿ ಸ್ವೀಕರಿಸುವಂತೆ ಸಲಹೆ ನೀಡುತ್ತಾರೆ.

ಯಾರಿಗೆ ಹೆಚ್ಚು ರೆಸ್ಟ್‌ ಬೇಕು?

ಋತುಚಕ್ರದ ಸಮಯದಲ್ಲಿ ಕೆಲವರಲ್ಲಿ ತೀವ್ರ ಕಿಬ್ಬೊಟ್ಟೆ ನೋವು, ಆಯಾಸ, ತೀವ್ರವಾದ ಮನಸ್ಸಿನ ಅಸ್ಥಿರತೆ (ಮೂಡ್‌ ಸ್ವಿಂಗ್‌) ಕಾಣಿಸಿಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ವಿಶ್ರಾಂತಿ ತೆಗೆದುಕೊಳ್ಳುವುದು ಉತ್ತಮ. ಇದರಿಂದ ದೇಹಕ್ಕೆ ಕೂಡ ನೋವನ್ನು ನಿರ್ವಹಿಸಲು ಸಹಾಯವಾಗುತ್ತದೆ. ಇನ್ನು ಕೆಲವು ಆರೋಗ್ಯ ಸಮಸ್ಯೆಗಳಿರುತ್ತವೆ. ಉದಾಹರಣೆಗೆ ತೀವ್ರವಾದ ರಕ್ತಸ್ರಾವ , ಅತಿಯಾದ ಸುಸ್ತು, ಅನಿಮಿಯಾ, ಎಂಡೊಮೆಟ್ರಿಯೊಸಿಸ್‌, ಫಿಬ್ರೊಯ್ಡ್‌ ಯುಟ್ರಸ್‌ ಅಥವಾ ಕೆಲವು ಹಾರ್ಮೋನ್‌ಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಔಷಧಗಳ ನೆರವು ಹಾಗೂ ವಿಶ್ರಾಂತಿ ಅತ್ಯಗತ್ಯವಾಗುತ್ತದೆ.

8 ಗಂಟೆಗಳ ಉತ್ತಮ ನಿದ್ದೆ ಅಗತ್ಯ

ಋತುಚಕ್ರದ ಸಮಯದಲ್ಲಿ ಉತ್ತಮ ನಿದ್ರೆ ಬಹಳ ಅಗತ್ಯ. ಹಾರ್ಮೋನ್‌ ಬದಲಾವಣೆಗಳು ನಿದ್ರೆಯ ಮೇಲೆ ಪರಿಣಾಮ ಬೀರುತ್ತವೆ ಹೀಗಾಗಿ 8 ಗಂಟೆಗಳ ಉತ್ತಮ ನಿದ್ರೆ ದೇಹದ ಸುಸ್ತು ನಿವಾರಣೆಗೆ ಸಹಾಯ ಮಾಡುತ್ತದೆ. ಹೆಚ್ಚು ಆಯಾಸ, ನೋವು ಇದ್ದಲ್ಲಿ ಹೆಚ್ಚುವರಿ ವಿಶ್ರಾಂತಿ ಅಗತ್ಯ.

ಆರೋಗ್ಯಕರ ಋತುಚಕ್ರ ಎಂದರೆ ಏನು?

ಸಾಮಾನ್ಯವಾಗಿ ಪೀರಿಯಡ್ಸ್‌ ಅಥವಾ ಋತುಚಕ್ರವು 21-35 ದಿನಗಳ ಅವಧಿಯಲ್ಲಿ 3-5 ದಿನಗಳವರೆಗೆ ನಡೆಯುತ್ತದೆ. ಆದರೆ 7 ದಿನಗಳಿಗೆ ಮೀರಿದ ಅತಿಯಾದ ರಕ್ತಸ್ರಾವ, ಪ್ರತಿ 2-3 ಗಂಟೆಗೊಮ್ಮೆ ಪ್ಯಾಡ್‌ ಬದಲಾಯಿಸುವಷ್ಟು ರಕ್ತಸ್ರಾವ ಜೊತೆಗೆ , ಅತಿಯಾದ ನೋವು21 ದಿನಕ್ಕೂ ಮೊದಲು ಅಥವಾ 35 ದಿನದ ನಂತರ ಕಾಣುವ ಪಿರಿಯಡ್ಸ್‌, ಅಥವಾ 90 ದಿನಗಳು ಮೀರಿದರೂ ಕಾಣಿಸಿಕೊಳ್ಳದ ಮುಟ್ಟು, ಈ ಲಕ್ಷಣಗಳನ್ನು ಆರೋಗ್ಯಕರವಲ್ಲದ ಪೀರಿಯಡ್ಸ್‌ ಎಂದು ಪರಿಗಣಿಸಲಾಗುತ್ತದೆ. ಕೆಲವು ಮೆಡಿಸಿನ್‌ಗಳಾದ ನ್ಯಾಪ್ರೊಕ್ಸೆನ್‌ , ಇಬುಪ್ರೊಫೆನ್‌ , ಡೈಕ್ಲೊಫೆನಾಕ್‌ ಮುಟ್ಟಿನ ನೋವು ನಿವಾರಣೆಗೆ ಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ. ಆದರೆ ತೀವ್ರತರವಾದ ಸಮಸ್ಯೆಗಳಿದ್ದಾಗ ತಜ್ಞರನ್ನು ಭೇಟಿಯಾಗಿ ತಪಾಸಣೆಗೆ ಒಳಪಡುವುದು ಉತ್ತಮ. ಇನ್ನು ಕಿಬ್ಬೊಟ್ಟೆಗೆ ಬಿಸಿ ನೀರಿನ ಶಾಖ , ಶಾಖದ ಚೀಲ ಬಳಕೆಯಿಂದಲೂ ನೋವು ನಿರ್ವಹಣೆಗೆ ನೆರವಾಗುತ್ತದೆ.

ಪ್ರಮುಖವಾದ ಪೌಷ್ಟಿಕ ಆಹಾರಗಳು

ಪೌಷ್ಟಿಕವಾದ ಆಹಾರಗಳು ಮುಟ್ಟಿನ ಲಕ್ಷಣಗಳನ್ನು ನಿಭಾಯಿಸುವಲ್ಲಿ ಮತ್ತು ಹಾರ್ಮೋನ್‌ ಸಮತೋಲನಕ್ಕೆ ಸಹಾಯಕಾರಿ. ಅಧ್ಯಯನಗಳ ಪ್ರಕಾರ ತಾಜಾ ಮತ್ತು ಸಂಸ್ಕರಿಸದ ಆಹಾರ ಸೇವನೆಯಿಂದ ಮುಟ್ಟಿನ ದಿನಗಳನ್ನು (ಋತುಚಕ್ರ) ನಿಯಮಿತಗೊಳಿಸುವಲ್ಲಿ ಸಹಾಯಮಾಡುತ್ತವೆ. ಹಾಗೇ ಒಮೆಗಾ-3, ಫ್ಯಾಟಿ ಆಸಿಡ್ಸ್‌, ಕ್ಯಾಲ್ಶಿಯಮ್‌ ಮತ್ತು ವಿಟಮಿನ್‌ ಡಿ ಪಿಎಮ್‌ಎಸ್‌ ಸಮಸ್ಯೆತಗ್ಗಿಸುವಲ್ಲಿ ಪರಿಣಾಮಕಾರಿ.

ಇನ್ನು ದಿನಕ್ಕೆ 2 ಲೀಟರ್‍‌ ನೀರು ಕುಡಿಯುವುದರಿಂದ ದೇಹದಲ್ಲಿ ಕಳೆದುಹೋದ ನೀರಿನಾಂಶ ಮರುಪೂರೈಸುವಲ್ಲಿ ಸಹಾಯವಾಗುತ್ತದೆ. ಜೊತೆಗೆ ನಿರ್ಜಲೀಕರಣ, ತಲೆ ನೋವು, ಹೊಟ್ಟೆ ಉಬ್ಬರ ಕಡಿಮೆ ಮಾಡಲು ನೆರವಾಗುತ್ತದೆ. ತಾಜಾ ಹಣ್ಣುಗಳು ಅಗತ್ಯವಾದ ಪೌಷ್ಟಿಕಾಂಶ ನೀಡುವ ಜೊತೆಗೆ ನೈಸರ್ಗಿಕ ಸಕ್ಕರೆ ಮೂಲಕ ಕ್ರೇವಿಂಗ್ಸ್‌ಗಳನ್ನು ಕಡಿಮೆ ಮಾಡುತ್ತವೆ. ಸ್ನಾಯು ನೋವು ತಡೆಗೆ ವಿಟಮಿನ್‌ ಬಿ 6 ಮತ್ತು ಪೊಟ್ಯಾಶಿಯಮ್‌ ಹೊಂದಿರುವ ಬಾಳೆಹಣ್ಣು ಉತ್ತಮ. ಹಸಿರು ಸೊಪ್ಪುಗಳು ಅಗತ್ಯವಾದ ಕಬ್ಬಿಣಾಂಶ ಮತ್ತು ಮ್ಯಾಗ್ನೇಶೀಯಮ್‌ ಮಟ್ಟವನ್ನು ಏರಿಸಲು ಸಹಕಾರಿ. ಶುಂಠಿ ಕಿಬ್ಬೊಟ್ಟೆ ನೋವು ನಿವಾರಣೆಗೆ ಹಾಗೂ ಅರಿಶಿಣ ಪಿಎಮ್‌ಎಸ್‌ ಲಕ್ಷಣದ ತೀವ್ರತೆಯನ್ನು ತಡೆಯುವಲ್ಲಿ ಉತ್ತಮ. ಹಾಗೇ ಡಾರ್ಕ್‌ ಚಾಕಲೇಟ್‌ ಕೂಡ ಮುಟ್ಟಿನ ದಿನಗಳ ಸಮಸ್ಯೆಯನ್ನು ತಗ್ಗಿಸಲು ಸಹಾಯಕಾರಿಯಾಗಿ ಕೆಲಸ ಮಾಡುತ್ತದೆ.
ಮಸೂರ ದಾಲ್‌, ಬೀನ್ಸ್‌, ನಟ್ಸ್‌ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಬ್ಯಾಲೆನ್ಸ್‌ ಮಾಡುವುದರ ಜೊತೆಗೆ ದೇಹಕ್ಕೆ ಕಳೆದುಹೋದ ಕಬ್ಬಿಣಾಂಶ ನೀಡಲು ನೆರವಾಗುತ್ತದೆ. ಇನ್ನು ಈಸ್ಟ್‌ ಸೋಂಕುಗಳನ್ನು ನಿವಾರಿಸಲು ಯೋಗರ್ಟ್ ಉತ್ತಮ ಕೆಲಸ ಮಾಡುತ್ತದೆ.

ಆ ಸಮಯದಲ್ಲಿ ಯಾವ ಆಹಾರಗಳ ಸೇವನೆ ಬೇಡ?

ಶುಗರ್‌ ಕ್ರೇವಿಂಗ್ಸ್‌ ಎಂದು ಅತಿಯಾದ ಸಕ್ಕರೆ, ಉಪ್ಪು ಹಾಗೂ ಖಾರದ ಆಹಾರ ಬೇಡ. ಅತಿಯಾದ ಸೋಡಿಯಮ್‌ಯುಕ್ತ ಆಹಾರಗಳು ನೀರಿನಾಂಶ ತಗ್ಗಿಸಿ ಹೊಟ್ಟೆ ಉಬ್ಬರಕ್ಕೆ ಕಾರಣವಾಗುತ್ತವೆ. ಅತಿಯಾದ ಸಕ್ಕರೆ ಸೇವನೆಯಿಂದ ಸಕ್ಕರೆ ಪ್ರಮಾಣ ಹೆಚ್ಚಿ ಮೂಡ್‌ ಸ್ವಿಂಗ್‌ ಸಮಸ್ಯೆ ಹೆಚ್ಚಿಸುತ್ತದೆ. ಜೊತೆಗೆ ಕಿಬ್ಬೊಟ್ಟೆ ನೋವು ಹೆಚ್ಚಲು ಕಾರಣವಾಗುತ್ತದೆ. ಹಾಗೇ ಆಲ್ಕೋಹಾಲ್‌ ಸೇವನೆ ಬೇಗನೆ ನಿರ್ಜಲೀಕರಣಕ್ಕೆ ಒಡ್ಡುತ್ತದೆ. ಇದರಿಂದ ತಲೆ ನೋವು ಹೆಚ್ಚುತ್ತದೆ.ಕೆಫೆನ್‌ ಮುಟ್ಟಿನ ನೋವನ್ನು ಹೆಚ್ಚಿಸುತ್ತದೆ. ಇನ್ನು ಖಾರದ ಪದಾರ್ಥಗಳು ಹೊಟ್ಟೆಯಲ್ಲಿ ಉರಿ, ಬೇದಿ , ವಾಂತಿ, ಜೀರ್ಣಕ್ರಿಯೆ ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ.

ಮುಟ್ಟಿನ ದಿನಗಳಲ್ಲಿ ದೈಹಿಕ ಚಟುವಟಿಕೆಯೂ ಮುಖ್ಯ

ದೇಹಕ್ಕೆ ವ್ಯಾಯಾಮ, ಚಟುವಟಿಕೆಗಳು ಕಿಬ್ಬೊಟ್ಟೆ, ಬೆನ್ನು ನೋವು ನಿವಾರಣೆಗೆ ಸಹಕಾರಿ ಆದರೆ ಈ ಸಮಯದಲ್ಲಿ ಅತಿಯಾದ ಭಾರ ಎತ್ತುವ , ಹೊಟ್ಟೆಯ ಮೇಲೆ ಭಾರ ಬೀಳುವ ವ್ಯಾಯಾಮ, ಯೋಗಾಭ್ಯಾಸಗಳು ಬೇಡ. ವಾಕಿಂಗ್, ಲಘು ಯೋಗ, ಸ್ವಿಮ್ಮಿಂಗ್‌ ಉತ್ತಮ. ಆದರೆ ರಕ್ತಸ್ರಾವ ಅಧಿಕವಾಗಿದ್ದು, ಸುಸ್ತು ಇದ್ದಲ್ಲಿ ವ್ಯಾಯಾಮ ಬೇಡ ವಿಶ್ರಾಂತಿ ಪಡೆಯಿರಿ.

ಮುಟ್ಟಿನ ಸಮಯದಲ್ಲಿ ಆ ಪ್ರಕ್ರಿಯೆ ಆರೋಗ್ಯಕರವಾಗಿ ನಡೆಯುತ್ತಿದ್ದಲ್ಲಿ ಸ್ವಲ್ಪ ವಿಶ್ರಾಂತಿ ಹಾಗೇ ದೈಹಿಕ ಚಟುವಟಿಕೆ ಎರಡನ್ನೂ ನಡೆಸಿಕೊಂಡು ಹೋಗಿ. ಆದರೆ ಈ ಸಮಯದಲ್ಲಿ ಅಧಿಕ ಒತ್ತಡ, ದೈಹಿಕ ಶ್ರಮ ಬೇಡುವ ಕೆಲಸ ಕೂಡ ಸೂಕ್ತವಲ್ಲ . ಹಾಗೇ ಮುಟ್ಟಿನ ದಿನಗಳಲ್ಲಿ ಸಮಸ್ಯೆ ಇದ್ದಲ್ಲಿ ಆದಷ್ಟು ವಿಶ್ರಾಂತಿ ಪಡೆಯಿರಿ.

error: Content is protected !!