Sunday, January 11, 2026

ರಾಜ್ಯದಲ್ಲಿ ಸರ್ಕಾರ ಬದುಕಿದೆಯಾ, ಸತ್ತಿದೆಯಾ?: ಬಳ್ಳಾರಿ ಶೂಟೌಟ್ ಬೆನ್ನಲ್ಲೇ HDK ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಳ್ಳಾರಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತನ ಕೊಲೆ ಪ್ರಕರಣವು ಈಗ ರಾಜಕೀಯ ತಿರುವು ಪಡೆದಿದೆ. ಈ ಕುರಿತು ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ರಾಜ್ಯ ಸರ್ಕಾರದ ನಡೆಗಳ ಬಗ್ಗೆ ತೀವ್ರ ಅನುಮಾನ ವ್ಯಕ್ತಪಡಿಸಿದ್ದಾರೆ.

“ಒಂದೇ ಶವಕ್ಕೆ ಎರಡು ಬಾರಿ ಮರಣೋತ್ತರ ಪರೀಕ್ಷೆ ಮಾಡಿರುವ ಉದ್ದೇಶವೇನು?” ಎಂದು ಪ್ರಶ್ನಿಸಿದ ಅವರು, ಇದು ಪೂರ್ವನಿಯೋಜಿತ ಸಂಚು ಎಂದು ಆರೋಪಿಸಿದರು. ಎರಡನೇ ಬಾರಿ ಶವ ಪರೀಕ್ಷೆ ನಡೆಸಲು ಯಾರ ಒತ್ತಡವಿತ್ತು ಮತ್ತು ಇದಕ್ಕೆ ಅನುಮತಿ ನೀಡಿದವರು ಯಾರು ಎಂದು ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಶಾಸಕ ಜನಾರ್ದನ ರೆಡ್ಡಿ ಅವರ ಮೇಲೆ ಸುಳ್ಳು ಆರೋಪ ಹೊರಿಸುವ ಉದ್ದೇಶದಿಂದಲೇ ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂಬ ಗಂಭೀರ ಆರೋಪವನ್ನು ಕುಮಾರಸ್ವಾಮಿ ಮಾಡಿದರು. ಈ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕಾದರೆ ತನಿಖೆಯನ್ನು ತಕ್ಷಣವೇ ಸಿಬಿಐಗೆ ವಹಿಸಬೇಕು ಎಂದು ಅವರು ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ವೈಖರಿಯನ್ನು ಟೀಕಿಸಿದ ಅವರು, “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬಳ್ಳಾರಿಯಲ್ಲಿ ಗುಂಡಿನ ದಾಳಿ ನಡೆದಿದ್ದರೂ ಸರ್ಕಾರ ಮೌನವಾಗಿದೆ. ಸಿದ್ದರಾಮಯ್ಯನವರು ದೇವರಾಜ್ ಅರಸು ಅವರ ದಾಖಲೆ ಮುರಿಯಲು ಹೊರಟಿದ್ದಾರೆ, ಆದರೆ ಅವರ ಸಾಧನೆ ಶೂನ್ಯ,” ಎಂದು ಕಿಡಿಕಾರಿದರು. “ರಾಜ್ಯದಲ್ಲಿ ಸರ್ಕಾರ ಬದುಕಿದೆಯಾ ಅಥವಾ ಸತ್ತಿದೆಯಾ?” ಎಂದು ಪ್ರಶ್ನಿಸುವ ಮೂಲಕ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

error: Content is protected !!