ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಚೀನಾ ನಡುವೆ 2020ರಲ್ಲಿ ನಡೆದ ಭೀಕರ ಗಲ್ವಾನ್ ಸಂಘರ್ಷ ಕೇವಲ ಗಡಿ ವಿವಾದಕ್ಕೆ ಸೀಮಿತವಾಗಿರಲಿಲ್ಲವೇ? ಇಡೀ ವಿಶ್ವದ ಗಮನವನ್ನು ಬೇರೆಡೆ ಸೆಳೆದು, ಚೀನಾ ತನ್ನ ರಹಸ್ಯ ಅಣ್ವಸ್ತ್ರ ದಾಹವನ್ನು ತೀರಿಸಿಕೊಳ್ಳಲು ನಡೆಸಿದ ವ್ಯವಸ್ಥಿತ ಸಂಚು ಇದಾಗಿತ್ತೇ? ಹೀಗೊಂದು ಸ್ಫೋಟಕ ಸತ್ಯ ಈಗ ಹೊರಬಿದ್ದಿದೆ.
ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ನಿಶ್ಯಸ್ತ್ರೀಕರಣ ಸಮ್ಮೇಳನದಲ್ಲಿ ಅಮೆರಿಕದ ವಿದೇಶಾಂಗ ಇಲಾಖೆ ಅಧಿಕಾರಿ ಥಾಮಸ್ ಡಿನನ್ನೊ ಅವರು ಚೀನಾದ ಕುತಂತ್ರವನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ. ಗಲ್ವಾನ್ ಸಂಘರ್ಷ ನಡೆದ ಸರಿಯಾಗಿ ಒಂದು ವಾರದ ಬಳಿಕ (ಜೂನ್ 22, 2020), ಚೀನಾವು ಷಿನ್‌ಜಿಯಾಂಗ್ ಪ್ರಾಂತ್ಯದ ಲಾಪ್ ನೂರ್ ಎಂಬಲ್ಲಿ ಅತ್ಯಂತ ರಹಸ್ಯವಾಗಿ ಪರಮಾಣು ಪರೀಕ್ಷೆ ನಡೆಸಿದೆ ಎಂದು ಅವರು ಪುರಾವೆಗಳೊಂದಿಗೆ ಆರೋಪಿಸಿದ್ದಾರೆ.
ಸಾಮಾನ್ಯವಾಗಿ ಭೂಗತ ಅಣು ಪರೀಕ್ಷೆ ನಡೆಸಿದಾಗ ಭೂಮಿಯಲ್ಲಿ ಕಂಪನ ಉಂಟಾಗುತ್ತದೆ. ಇದನ್ನು ಜಾಗತಿಕ ನಿಗಾ ಸಂಸ್ಥೆಗಳು ಸುಲಭವಾಗಿ ಪತ್ತೆಹಚ್ಚುತ್ತವೆ. ಆದರೆ ಚೀನಾ ಈ ಕಂಪನಗಳನ್ನು ಮರೆಮಾಚಲು ‘ಡಿಕೌಪ್ಲಿಂಗ್’ ಎಂಬ ಅತ್ಯಾಧುನಿಕ ತಂತ್ರಜ್ಞಾನ ಬಳಸಿದೆ. ಈ ಮೂಲಕ ಜಗತ್ತಿಗೆ ಅಣು ಪರೀಕ್ಷೆಯ ಸುಳಿವೇ ಸಿಗದಂತೆ ಚೀನಾ ಜಾಣತನ ಪ್ರದರ್ಶಿಸಿದೆ.
ಜೂನ್ 15-16ರ ಗಲ್ವಾನ್ ಸಂಘರ್ಷದಲ್ಲಿ ಭಾರತದ 20 ವೀರ ಯೋಧರು ಹುತಾತ್ಮರಾಗಿದ್ದರು. ಇಡೀ ಜಗತ್ತು ಈ ಸಂಘರ್ಷದ ಮೇಲೆ ಕಣ್ಣಿಟ್ಟಿದ್ದಾಗಲೇ, ಚೀನಾ ತನ್ನ ಪರಮಾಣು ಪರೀಕ್ಷೆಯತ್ತ ಗಮನ ಹರಿಸಿತ್ತು.
‘ಸಮಗ್ರ ಪರಮಾಣು ಪರೀಕ್ಷಾ ನಿಷೇಧ ಒಪ್ಪಂದ’ (CTBT) ಅಡಿಯಲ್ಲಿ ಯಾವುದೇ ದೇಶ ಅಣು ಪರೀಕ್ಷೆ ನಡೆಸುವಂತಿಲ್ಲ. ಆದರೆ ಚೀನಾ ಗಡಿಯಲ್ಲಿ ಯುದ್ಧದ ವಾತಾವರಣ ಸೃಷ್ಟಿಸಿ, ಅದರ ಮರೆಯಲ್ಲಿ ಈ ನಿಯಮವನ್ನು ಗಾಳಿಗೆ ತೂರಿದೆ.
ಗಡಿಯಲ್ಲಿ ಗದ್ದಲ ಎಬ್ಬಿಸಿ ಜಾಗತಿಕ ಸಂಸ್ಥೆಗಳ ಗಮನವನ್ನು ಬೇರೆಡೆಗೆ ಸೆಳೆಯುವುದು ಮತ್ತು ಆ ಸಮಯದಲ್ಲಿ ತನ್ನ ರಹಸ್ಯ ಕಾರ್ಯಸೂಚಿಯನ್ನು ಪೂರೈಸಿಕೊಳ್ಳುವುದು ಚೀನಾದ ಪ್ಲಾನ್ ಆಗಿತ್ತೇ ಎಂಬ ಸಂಶಯ ಈಗ ದಟ್ಟವಾಗಿದೆ.



