ನೀರನ್ನು ದೇಹದ ಜೀವನಾಡಿ ಎಂದು ಕರೆಯುತ್ತಾರೆ. ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಕನಿಷ್ಠ 8 ಗ್ಲಾಸ್ ನೀರು ಕುಡಿಯಬೇಕು ಎಂಬುದು ಎಲ್ಲರಿಗೂ ಪರಿಚಿತವಾದ ವಿಷಯ. ಆದರೆ ಪದೇಪದೇ ನೀರು ಕುಡಿಯುವುದರಿಂದಲೂ ದೇಹದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸುತ್ತಾರೆ. ಆದ್ದರಿಂದ ನೀರು ಕುಡಿಯಲು ಸರಿಯಾದ ಸಮಯವನ್ನು ಪಾಲಿಸುವುದು ಮುಖ್ಯ.
ಬೆಳಗ್ಗೆ ಎದ್ದ ಕೂಡಲೇ
ನಿದ್ದೆಯಿಂದ ಎದ್ದ ತಕ್ಷಣ ಒಂದು ಗ್ಲಾಸ್ ನೀರು ಕುಡಿಯುವುದು ಅಗತ್ಯ. ಇದು ದೇಹದ ಒಳಗಿನ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ.

ಊಟಕ್ಕೂ ಮುಂಚೆ ಮತ್ತು ನಂತರ
ಊಟ ಮಾಡುವುದಕ್ಕೆ ಅರ್ಧ ಗಂಟೆ ಮುಂಚೆ ಒಂದು ಗ್ಲಾಸ್ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. ಊಟವಾದ ನಂತರ ಅರ್ಧ ಗಂಟೆ ಕಾಯ್ದು ನೀರು ಕುಡಿಯುವುದರಿಂದ ಪೋಷಕಾಂಶಗಳ ಹೀರಿಕೊಳ್ಳುವಿಕೆ ಸುಲಭವಾಗುತ್ತದೆ.
ಸ್ನಾನಕ್ಕೂ ಮೊದಲು
ಸ್ನಾನಕ್ಕೆ ಮುಂಚೆ ಒಂದು ಗ್ಲಾಸ್ ನೀರು ಕುಡಿಯುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿ ಇರುತ್ತದೆ. ಸ್ನಾನದ ವೇಳೆ ದೇಹದ ತಾಪಮಾನ ಮತ್ತು ರಕ್ತಪ್ರವಾಹದಲ್ಲಿ ಬರುವ ಬದಲಾವಣೆಯನ್ನು ಸಮತೋಲನಗೊಳಿಸಲು ಇದು ಸಹಾಯಕ.

ದಿನನಿತ್ಯ ಅನುಸರಿಸಬಹುದಾದ ವೇಳಾಪಟ್ಟಿ
ಬೆಳಗ್ಗೆ 7 ಗಂಟೆ – ಎದ್ದ ಕೂಡಲೇ ಒಂದು ಗ್ಲಾಸ್
9 ಗಂಟೆ – ಉಪಹಾರವಾದ ಒಂದು ಗಂಟೆ ನಂತರ
11.30ಕ್ಕೆ – ಊಟಕ್ಕೂ ಅರ್ಧ ಗಂಟೆ ಮುಂಚೆ
1.30ಕ್ಕೆ – ಮಧ್ಯಾಹ್ನ ಊಟವಾದ ಒಂದು ಗಂಟೆ ನಂತರ
3 ಗಂಟೆಗೆ – ಚಹಾ ವಿರಾಮದ ಸಮಯದಲ್ಲಿ
5 ಗಂಟೆಗೆ – ಸಂಜೆ ಹಸಿವು ನಿಯಂತ್ರಣಕ್ಕೆ
8 ಗಂಟೆಗೆ – ರಾತ್ರಿ ಊಟಕ್ಕೂ ಒಂದು ಗಂಟೆ ಮೊದಲು
10 ಗಂಟೆಗೆ – ಮಲಗುವ ಮೊದಲು ಒಂದು ಗ್ಲಾಸ್

ಸರಿಯಾದ ಸಮಯಕ್ಕೆ ನೀರು ಕುಡಿಯುವುದರಿಂದ ದೇಹದ ಎಲ್ಲಾ ಅಂಗಾಂಗಗಳ ಕಾರ್ಯಚಟುವಟಿಕೆ ಸರಾಗವಾಗಿ ನಡೆಯುತ್ತವೆ. ಅತಿಯಾಗಿ ನೀರು ಕುಡಿಯುವುದರಿಂದ ಉಂಟಾಗುವ ತೊಂದರೆಗಳನ್ನು ತಪ್ಪಿಸಿ, ದಿನನಿತ್ಯದ ವೇಳಾಪಟ್ಟಿಗೆ ಅನುಗುಣವಾಗಿ ನೀರು ಸೇವಿಸಿದರೆ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚು ಸಹಾಯಕವಾಗುತ್ತದೆ.