ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಲನಚಿತ್ರ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿರುವ ಕಾಂತಾರ: ಅಧ್ಯಾಯ 1 (Kantara Chapter 1) ಪ್ರಪಂಚದಾದ್ಯಂತ ಸಂಚಲನ ಸೃಷ್ಟಿಸಿದೆ. 2022ರಲ್ಲಿ ಬಿಡುಗಡೆಯಾದ ಕಾಂತಾರ ಚಿತ್ರದ ಪ್ರೀಕ್ವೆಲ್ ಆಗಿ ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ಈ ಸಿನಿಮಾ ಅಕ್ಟೋಬರ್ 2, 2025ರಂದು ಬಿಡುಗಡೆಯಾಗಿ ಕೇವಲ ಕೆಲವು ದಿನಗಳಲ್ಲಿ ಬೃಹತ್ ಯಶಸ್ಸು ದಾಖಲಿಸಿದೆ. ಈಗ ಈ ಸಿನಿಮಾ ರಾಷ್ಟ್ರಪತಿ ಭವನದಲ್ಲಿಯೇ ಪ್ರದರ್ಶನಗೊಳ್ಳಲು ಸಜ್ಜಾಗಿದೆ. ಅಕ್ಟೋಬರ್ 5ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಮ್ಮುಖದಲ್ಲಿ ವಿಶೇಷ ಪ್ರದರ್ಶನ ಏರ್ಪಡಿಸಲಾಗುತ್ತಿದೆ.
33 ದೇಶಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾದ ಈ ಚಿತ್ರ, ಭಾರತದಲ್ಲಿ ಮಾತ್ರ 7000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ತೆರೆಕಂಡಿದ್ದು, ಕರ್ನಾಟಕದಲ್ಲೇ 350ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಪ್ರದರ್ಶನಗೊಂಡಿದೆ. ಆರಂಭಿಕ ದಿನಗಳಿಂದಲೇ ಅಭಿಮಾನಿಗಳಿಂದ ಸಿಕ್ಕಿರುವ ಪ್ರತಿಕ್ರಿಯೆ ಅದ್ಭುತವಾಗಿದ್ದು, ಎರಡೇ ದಿನಗಳಲ್ಲಿ ಸಿನಿಮಾ 100 ಕೋಟಿಗೂ ಮಿಕ್ಕಿದ ಬಾಕ್ಸ್ ಆಫೀಸ್ ಗಳಿಕೆ ಸಾಧಿಸಿದೆ. ಮೊದಲ ದಿನದ ಒಟ್ಟು ಕಲೆಕ್ಷನ್ ಭರ್ಜರಿಯಾಗಿದ್ದರೆ, ಎರಡನೇ ದಿನ 46 ಕೋಟಿ ಸಂಗ್ರಹಿಸಿ ಎಲ್ಲರ ಗಮನ ಸೆಳೆದಿದೆ. ಮೂರನೇ ದಿನದ ಅಂತ್ಯಕ್ಕೆ ಒಟ್ಟು 162.85 ಕೋಟಿ ಕಲೆಕ್ಷನ್ ದಾಖಲಿಸಿದ್ದು, ನಾಲ್ಕನೇ ದಿನ ವಾರಾಂತ್ಯದ ಬೆಂಬಲದಿಂದ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ.
ಇದಕ್ಕೂ ಮೊದಲು 2023ರಲ್ಲಿ ಕಾಂತಾರ ಸಿನಿಮಾ ವಿಶ್ವಸಂಸ್ಥೆಯಲ್ಲಿಯೂ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿದ್ದಿತ್ತು. ಈಗ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ವಿಶೇಷ ಪ್ರದರ್ಶನವು ಚಿತ್ರತಂಡಕ್ಕೆ ಮತ್ತೊಂದು ಗೌರವದ ಕ್ಷಣವಾಗಲಿದೆ. ಈ ಸಂದರ್ಭದಲ್ಲಿ ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ ಸೇರಿದಂತೆ ಪ್ರಮುಖ ತಂಡದ ಸದಸ್ಯರು ಹಾಜರಾಗಲಿದ್ದಾರೆ.