ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಜನಕಪುರಿ ಪ್ರದೇಶದಲ್ಲಿ ರಸ್ತೆ ಕಾಮಗಾರಿಗಾಗಿ ಅಗೆದಿದ್ದ ಆಳವಾದ ಹೊಂಡಕ್ಕೆ ಬೈಕ್ ಬಿದ್ದು ಯುವಕನೊಬ್ಬ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಗುರುವಾರ ರಾತ್ರಿ ಕಚೇರಿಯಿಂದ ಮನೆಗೆ ಹೊರಟಿದ್ದ ಕಮಲ್ ಎಂಬ ಯುವಕ ತಡರಾತ್ರಿ ಮನೆ ತಲುಪದೇ ಇದ್ದುದರಿಂದ ಕುಟುಂಬದವರು ಆತಂಕಕ್ಕೊಳಗಾದರು.
ರೋಹಿಣಿಯಲ್ಲಿ ಕೆಲಸ ಮಾಡುತ್ತಿದ್ದ ಕಮಲ್ ಕೈಲಾಸಪುರಿಯಲ್ಲಿ ವಾಸವಾಗಿದ್ದು, ರಾತ್ರಿ ಹೊತ್ತಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬದವರು ಹಲವು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಹುಡುಕಾಟ ನಡೆಸಿದರು. ಜನಕಪುರಿ, ಸಾಗರ್‌ಪುರ ಹಾಗೂ ವಿಕಾಸಪುರಿ ಪ್ರದೇಶಗಳಲ್ಲಿ ವಿಚಾರಿಸಿದರೂ ಯಾವುದೇ ಸ್ಪಷ್ಟ ಮಾಹಿತಿ ಸಿಗಲಿಲ್ಲ.
ಇದನ್ನೂ ಓದಿ:
ಶುಕ್ರವಾರ ಬೆಳಗ್ಗೆ ಸುಮಾರು 7.30ರ ಸುಮಾರಿಗೆ ಪೊಲೀಸರು ಕರೆ ಮಾಡಿ ಮಾಹಿತಿ ನೀಡಿದ ಬಳಿಕ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿದರು. ಅಲ್ಲಿ ಕಮಲ್ ತನ್ನ ಬೈಕ್ ಸಮೇತ ಹೊಂಡಕ್ಕೆ ಬಿದ್ದಿರುವುದು ಕಂಡುಬಂದಿದೆ. ಈ ಘಟನೆಗೆ ಜಲಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬದವರು ಆರೋಪಿಸಿದ್ದಾರೆ. ಕೆಲವರು ಇದರಲ್ಲಿ ಸಂಶಯಾಸ್ಪದ ಅಂಶಗಳೂ ಇರಬಹುದು ಎಂದು ಹೇಳುತ್ತಿದ್ದಾರೆ.



