ಹೊಸದಿಗಂತ ರಾಯಚೂರು:
ಕೇಂದ್ರದ ಎನ್‌ಡಿಎ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ‘ವಿಬಿ-ಗ್ರಾಮ್ ಜಿ’ ಕಾಯ್ದೆಯು ಗ್ರಾಮೀಣ ಭಾರತದ ಬೆನ್ನೆಲುಬಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGS) ಅಸ್ತಿತ್ವಕ್ಕೆ ಧಕ್ಕೆ ತರಲಿದೆ ಎಂದು ಸಂಸದ ಜಿ.ಕುಮಾರ ನಾಯಕ ಕಳವಳ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದ ಸಂಸದರ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹೊಸ ಕಾಯ್ದೆಯು ಜಾರಿಯಾದರೆ ಗ್ರಾಮೀಣ ಭಾಗದ ಬಡವರ ಉದ್ಯೋಗದ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಇದರ ಪರಿಣಾಮವಾಗಿ ಹಳ್ಳಿಗಳಿಂದ ಜನರು ಉದ್ಯೋಗ ಅರಸಿ ನಗರಗಳಿಗೆ ಗುಳೆ ಹೋಗುವ ಪರಿಸ್ಥಿತಿ ಮತ್ತೆ ಮರುಕಳಿಸಲಿದೆ ಎಂದು ಎಚ್ಚರಿಸಿದರು.
ಹೊಸ ಯೋಜನೆಯು ಸಂಪೂರ್ಣವಾಗಿ ಕೇಂದ್ರದ ಹಿಡಿತದಲ್ಲಿರಲಿದ್ದು, ಇದರಿಂದ ‘ಗ್ರಾಮ ಸ್ವರಾಜ್ಯ’ದ ಆಶಯಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಯೋಜನೆ ರೂಪಿಸುವ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳ ಹಕ್ಕನ್ನು ಈ ಕಾಯ್ದೆ ಕಿತ್ತುಕೊಳ್ಳಲಿದೆ. ಪಂಚಾಯತ್‌ಗಳು ಕೇವಲ ಅನುಷ್ಠಾನಕ್ಕೆ ಸೀಮಿತವಾಗಲಿವೆ.
ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಉದ್ಯೋಗ ಖಾತರಿ ಯೋಜನೆಯು ಶೋಷಿತರನ್ನು ಮುಖ್ಯವಾಹಿನಿಗೆ ತಂದಿತ್ತು. ಆದರೆ ಈ ನೂತನ ಕಾಯ್ದೆಯು ಸಮಾಜದ ಕೆಳಹಂತದ ಜನರ ಬದುಕಿಗೆ ಕೊಡಲಿ ಪೆಟ್ಟು ನೀಡಲಿದೆ. ಸ್ಟ್ಯಾಂಡಿಂಗ್ ಕಮಿಟಿಯ ಯಾವುದೇ ಮಹತ್ವದ ಶಿಫಾರಸ್ಸುಗಳನ್ನು ಈ ಕಾಯ್ದೆಯಲ್ಲಿ ಅಳವಡಿಸಿಕೊಂಡಿಲ್ಲ ಎಂಬುದು ಸಂಸದರ ಆಕ್ಷೇಪವಾಗಿದೆ.
ಈ ಸಂದರ್ಭದಲ್ಲಿ ಮುಖಂಡರಾದ ರವಿ ಬೋಸರಾಜು, ಜಯಣ್ಣ, ಕೆ.ಶಾಂತಪ್ಪ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.



