January14, 2026
Wednesday, January 14, 2026
spot_img

ರಿಂಕು ಸಿಂಗ್ ‘ಲಕ್’ ಹಿಂದೆ ಇಶಾನ್ ಕಿಶನ್ ಕೈಚಳಕ: ವಿಶ್ವಕಪ್ ತಂಡ ಆಯ್ಕೆಯ ಇಂಟರೆಸ್ಟಿಂಗ್ ಇನ್ಸೈಡ್ ಸ್ಟೋರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬರುವ ಟಿ20 ವಿಶ್ವಕಪ್‌ಗೆ ಭಾರತದ 15 ಸದಸ್ಯರ ಬಲಿಷ್ಠ ಪಡೆಯನ್ನು ಪ್ರಕಟಿಸಲಾಗಿದ್ದು, ಯುವ ಸ್ಫೋಟಕ ಬ್ಯಾಟರ್ ರಿಂಕು ಸಿಂಗ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ರಿಂಕು ಸಿಂಗ್ ಅವರಿಗೆ ಈ ಸುವರ್ಣ ಅವಕಾಶ ಲಭಿಸಿದ್ದರ ಹಿಂದೆ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರ ಭರ್ಜರಿ ಫಾರ್ಮ್ ಅಡಗಿದೆ ಎಂಬುದು ಕುತೂಹಲಕಾರಿ ಸಂಗತಿ.

ಇತ್ತೀಚೆಗೆ ನಡೆದ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಜಾರ್ಖಂಡ್ ಪರ ಕಣಕ್ಕಿಳಿದಿದ್ದ ಇಶಾನ್ ಕಿಶನ್, ಅಕ್ಷರಶಃ ಅಬ್ಬರಿಸಿದ್ದರು. 2 ಶತಕ ಹಾಗೂ 2 ಅರ್ಧಶತಕಗಳ ನೆರವಿನಿಂದ 511 ರನ್ ಸಿಡಿಸಿ ಆಯ್ಕೆಗಾರರ ಗಮನ ಸೆಳೆದಿದ್ದರು. ಇನ್ನೊಂದೆಡೆ, ಸೌತ್ ಆಫ್ರಿಕಾ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಶುಭ್​ಮನ್ ಗಿಲ್ ಅವರನ್ನು ತಂಡದಿಂದ ಕೈಬಿಡುವುದು ಬಿಸಿಸಿಐಗೆ ಅನಿವಾರ್ಯವಾಗಿತ್ತು. ಈ ಜಾಗಕ್ಕೆ ಆರಂಭಿಕನಾಗಿ ಇಶಾನ್ ಕಿಶನ್ ಮೊದಲ ಆಯ್ಕೆಯಾದರು.

ಇಶಾನ್ ಕಿಶನ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದು ಜಿತೇಶ್ ಶರ್ಮಾ ಅವರ ಸ್ಥಾನಕ್ಕೆ ಕಂಟಕವಾಯಿತು. ಏಕೆಂದರೆ ಇಶಾನ್ ಕಿಶನ್ ಆರಂಭಿಕ ಬ್ಯಾಟರ್ ಮಾತ್ರವಲ್ಲದೆ ವಿಕೆಟ್ ಕೀಪರ್ ಕೂಡ ಆಗಿದ್ದಾರೆ. ತಂಡದಲ್ಲಿ ಈಗಾಗಲೇ ಸಂಜು ಸ್ಯಾಮ್ಸನ್ ಮೊದಲ ವಿಕೆಟ್ ಕೀಪರ್ ಆಗಿ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಇಶಾನ್ ಎರಡನೇ ಕೀಪರ್ ಆಗಿ ಆಯ್ಕೆಯಾದ ಕಾರಣ, ಹೆಚ್ಚುವರಿ ಕೀಪರ್ ಆಗಿದ್ದ ಜಿತೇಶ್ ಶರ್ಮಾ ಅವರನ್ನು ತಂಡದಿಂದ ಕೈಬಿಡಲಾಯಿತು.

ಜಿತೇಶ್ ಶರ್ಮಾ ಹೊರಬಿದ್ದಿದ್ದರಿಂದ ತಂಡದಲ್ಲಿ ಒಬ್ಬ ಪರಿಣಾಮಕಾರಿ ‘ಫಿನಿಶರ್’ನ ಅಗತ್ಯವಿತ್ತು. ಈ ಹಂತದಲ್ಲಿ ಆಯ್ಕೆಗಾರರ ಕಣ್ಣಿಗೆ ಬಿದ್ದಿದ್ದು ರಿಂಕು ಸಿಂಗ್. ಇಶಾನ್ ಕಿಶನ್ ಅವರು ‘ಓಪನರ್ + ವಿಕೆಟ್ ಕೀಪರ್’ ಎಂಬ ಎರಡು ಜವಾಬ್ದಾರಿಗಳನ್ನು ನಿಭಾಯಿಸಬಲ್ಲ ಸಾಮರ್ಥ್ಯ ಹೊಂದಿದ್ದರಿಂದ, ತಂಡದಲ್ಲಿ ಒಬ್ಬ ಹೆಚ್ಚುವರಿ ಬ್ಯಾಟರ್‌ಗೆ ಜಾಗ ಉಳಿಯಿತು. ಆ ಒಂದು ಸ್ಥಾನ ಇದೀಗ ರಿಂಕು ಸಿಂಗ್ ಪಾಲಾಗಿದೆ.

ಒಟ್ಟಿನಲ್ಲಿ, ಇಶಾನ್ ಕಿಶನ್ ಅವರ ಅಮೋಘ ಫಾರ್ಮ್ ಶುಭ್​ಮನ್ ಗಿಲ್ ಮತ್ತು ಜಿತೇಶ್ ಶರ್ಮಾ ಅವರಿಗೆ ಹಿನ್ನಡೆಯಾದರೆ, ರಿಂಕು ಸಿಂಗ್ ಅವರ ವಿಶ್ವಕಪ್ ಕನಸು ನನಸಾಗಲು ದಾರಿಯಾಗಿದೆ. ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಆಡದಿದ್ದರೂ, ರಿಂಕು ಈಗ ನೇರವಾಗಿ ವಿಶ್ವಕಪ್ ಅಖಾಡಕ್ಕೆ ಸಜ್ಜಾಗಿದ್ದಾರೆ.

Most Read

error: Content is protected !!