ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಮತ್ತು ಗಾಜಾ ನಡುವಿನ ಶಾಂತಿ ಒಪ್ಪಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ.
ಟ್ರೂತ್ ಸೋಶಿಯಲ್ ನಲ್ಲಿ ಪೋಸ್ಟ್ ಮಾಡಿದ ಅಮೆರಿಕ ಅಧ್ಯಕ್ಷ ಟ್ರಂಪ್, ‘ಇಸ್ರೇಲ್ ಮತ್ತು ಹಮಾಸ್ ಎರಡೂ ನಮ್ಮ ಶಾಂತಿ ಯೋಜನೆಯ ಮೊದಲ ಹಂತಕ್ಕೆ ಸಹಿ ಹಾಕಿವೆ ಎಂದು ಘೋಷಿಸಲು ನನಗೆ ತುಂಬಾ ಹೆಮ್ಮೆಯಾಗಿದೆ. ಇದರರ್ಥ ಎಲ್ಲಾ ಒತ್ತೆಯಾಳುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಇದು ಅರಬ್ ಮತ್ತು ಮುಸ್ಲಿಂ ಜಗತ್ತು, ಇಸ್ರೇಲ್, ಸುತ್ತಮುತ್ತಲಿನ ಎಲ್ಲಾ ರಾಷ್ಟ್ರಗಳು ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ಇದು ಒಂದು ಐತಿಹಾಸಿಕ ದಿನವಾಗಿದೆ. ಈ ಐತಿಹಾಸಿಕ ಮತ್ತು ಅಭೂತಪೂರ್ವ ಘಟನೆಯನ್ನು ಸಾಧ್ಯವಾಗಿಸಲು ನಮ್ಮೊಂದಿಗೆ ಕೆಲಸ ಮಾಡಿದ ಕತಾರ್, ಈಜಿಪ್ಟ್ ಮತ್ತು ಟರ್ಕಿಯ ರಾಜತಾಂತ್ರಿಕ ಅಧಿಕಾರಿಗಳಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ಶಾಂತಿಪ್ರಿಯರೇ ಧನ್ಯರು’ ಎಂದು ಅವರು ಪೋಸ್ಟ್ ಮಾಡಿದ್ದರು.
ಈ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಟ್ರಂಪ್ ಅವರ 20 ಅಂಶಗಳ ಗಾಜಾ ಶಾಂತಿ ಯೋಜನೆಯ ಮೊದಲ ಹಂತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಜೊತೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಬಲವಾದ ನಾಯಕತ್ವದ ಪ್ರತಿಬಿಂಬ ಎಂದು ಕರೆದಿದ್ದಾರೆ. ‘ಒತ್ತೆಯಾಳುಗಳ ಬಿಡುಗಡೆ ಮತ್ತು ಹೆಚ್ಚಿದ ಮಾನವೀಯ ನೆರವು ಗಾಜಾದ ಜನರಿಗೆ ಕೊಂಚ ನಿರಾಳತೆಯನ್ನು ತರುತ್ತದೆ ಮತ್ತು ಶಾಶ್ವತ ಶಾಂತಿ ಒಪ್ಪಂದಕ್ಕೆ ದಾರಿ ಮಾಡಿಕೊಡುತ್ತದೆ’ ಎಂದು ಆಶಯ ವ್ಯಕ್ತಪಡಿಸಿದ್ದಾರೆ.