ಹೊಸದಿಗಂತ ಡಿಜಿಟಲ್ ಡೆಸ್ಕ್:
ಕತಾರ್ ರಾಜಧಾನಿ ದೋಹಾದಲ್ಲಿ ಇಸ್ರೇಲ್ ನಡೆಸಿದ ಭೀಕರ ವಾಯುದಾಳಿಯಲ್ಲಿ ಹಮಾಸ್ ನಾಯಕ ಬದುಕುಳಿದರೆ, ಅವರ ಪುತ್ರ ಸೇರಿ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆ. ಈ ದಾಳಿಯ ನಂತರ ಕತಾರ್ ಸೇರಿದಂತೆ ಪ್ಯಾಲೆಸ್ತೀನ್ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಹಮಾಸ್ ಬಂಡುಕೋರರ ಗುಂಪು ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದು, ಇದೊಂದು ಹೇಡಿತನದ ದಾಳಿ ಎಂದು ಖಂಡಿಸಿದೆ.
ವರದಿಗಳ ಪ್ರಕಾರ, ಇಸ್ರೇಲ್ ರಕ್ಷಣಾ ಪಡೆ (IDF) ಮತ್ತು ಇಸ್ರೇಲ್ ಭದ್ರತಾ ಸಂಸ್ಥೆ (ISA) ಮಂಗಳವಾರ ರಾತ್ರಿ ದೋಹಾದಲ್ಲಿರುವ ಹಮಾಸ್ ಹಿರಿಯ ನಾಯಕರ ವಸತಿಗೃಹವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಹಮಾಸ್ ನಾಯಕ ಖಲೀಲ್ ಅಲ್-ಹಯ್ಯನ ಪುತ್ರ, ಒಬ್ಬ ಸಹಾಯಕ, ಒಬ್ಬ ಭದ್ರತಾ ಸಿಬ್ಬಂದಿ ಸೇರಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದಾಳಿಯ ವೇಳೆಯಲ್ಲಿ ಹಮಾಸ್ ನಾಯಕರು ಕದನ ವಿರಾಮದ ಕುರಿತು ಚರ್ಚಿಸುತ್ತಿದ್ದರೆಂದು ತಿಳಿದುಬಂದಿದೆ.
ಈ ಘಟನೆ ಡೊನಾಲ್ಡ್ ಟ್ರಂಪ್ ನೀಡಿದ ಎಚ್ಚರಿಕೆಯ ಬೆನ್ನಲ್ಲೇ ನಡೆದಿದೆ. ಗಾಜಾದಲ್ಲಿ ಯುದ್ಧ ನಿಲ್ಲಬೇಕು, ಸೈನ್ಯ ಹಿಂದಕ್ಕೆ ಹೋಗಬೇಕು ಮತ್ತು ಗಾಜಾವನ್ನು ನೋಡಿಕೊಳ್ಳಲು ಬೇರೊಂದು ಸಮಿತಿ ರಚಿಸಬೇಕು ಎಂದು ಟ್ರಂಪ್ ಸಲಹೆ ನೀಡಿದ್ದರು. ಆದರೆ, ಅದೇ ಸಮಯದಲ್ಲಿ ಇಸ್ರೇಲ್ ವಾಯುದಾಳಿ ನಡೆಸಿರುವುದರಿಂದ ಶಾಂತಿ ಮಾತುಕತೆಗೆ ದೊಡ್ಡ ಹೊಡೆತ ಬಿದ್ದಿದೆ.
ಪ್ಯಾಲೆಸ್ತೀನ್ ಪರ ಸಂಘಟನೆಗಳು ಈ ದಾಳಿಯನ್ನು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆ ಹಾಗೂ ಶಾಂತಿ ಪ್ರಕ್ರಿಯೆಯನ್ನು ಹಾಳು ಮಾಡುವ ಕ್ರಮವೆಂದು ಖಂಡಿಸಿವೆ. ಕತಾರ್ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇಸ್ರೇಲ್ ಸೇನೆಯು ತನ್ನ ಭಾಗದಲ್ಲಿ ಸೂಕ್ತ ಮದ್ದುಗುಂಡುಗಳನ್ನು ಮಾತ್ರ ಬಳಸಲಾಗಿದ್ದು, ನಾಗರಿಕರಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಹೇಳಿದೆ.