ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇರಾನ್ ಬೆಂಬಲಿತ ಹೌತಿ ಬಂಡುಕೋರರ ಮೇಲೆ ಇಸ್ರೇಲ್ ಗುರುವಾರ ವೈಮಾನಿಕ ದಾಳಿ ನಡೆಸಿದ್ದು, ಹೌತಿ ಸಂಘಟನೆಯ ಸೇನಾ ಮುಖ್ಯಸ್ಥ ಮತ್ತು ಹಿರಿಯ ಮಿಲಿಟರಿ ಅಧಿಕಾರಿ ಮುಹಮ್ಮದ್ ಅಬ್ದುಲ್-ಕರೀಮ್ ಅಲ್-ಘಮರಿ ಸಾವನ್ನಪ್ಪಿದ್ದಾರೆ.
ತಮ್ಮ ಮಿಲಿಟರಿ ಕರ್ತವ್ಯಗಳಲ್ಲಿ ತೊಡಗಿರುವಾಗ ನಡೆದ ದಾಳಿಯ ಮೃತಪಟ್ಟಿರುವ ಬಗ್ಗೆ ಹೌತಿ ಬಂಡುಕೋರರ ಗುಂಪು ಘೋಷಿಸಿದ್ದು, ಇಸ್ರೇಲ್‌ಗೆ ನೇರ ಆರೋಪ ಮಾಡದಿದ್ದರೂ ಅಪರಾಧಗಳಿಗೆ ಕಠಿಣ ಶಿಕ್ಷೆ ಕಾದಿದೆ ಎಂದು ಎಚ್ಚರಿಸಿದೆ.
ಹೌತಿ ವಕ್ತಾರರು ಈ ಬಗ್ಗೆ ಹೇಳಿಕೆ ನೀಡಿದ್ದು, ಅಲ್-ಘಮರಿಯ ಹುತಾತ್ಮರಾಗಿದ್ದಾರೆ. ಇದು ನಮ್ಮ ಸ್ಥೈರ್ಯವನ್ನು ಕುಗ್ಗಿಸುವುದಿಲ್ಲ, ಬದಲಿಗೆ ಪ್ರತಿರೋಧ ಇನ್ನಷ್ಟು ಬಲಗೊಳ್ಳುತ್ತದೆ. ಇಸ್ರೇಲ್‌ನೊಂದಿಗಿನ ಸಂಘರ್ಷ ಇಲ್ಲಿಗೆ ಮುಗಿಯಿಲ್ಲ, ನಮ್ಮ ಜನರ ರಕ್ಷಣೆಗೆ ಯಾವ ಬೆಲೆ ತೆತ್ತಾದರೂ ಸಿದ್ಧ ಎಂದು ಘೋಷಿಸಿದ್ದಾರೆ.
ಹೌತಿಗಳು ಗಾಜಾದ ಪ್ಯಾಲೆಸ್ಟೀನಿಯನ್ನರ ಬೆಂಬಲಕ್ಕಾಗಿ ಇಸ್ರೇಲ್‌ನ ಕಡೆ ಕ್ಷಿಪಣಿಗಳನ್ನು ಹಾರಿಸಿದ್ದರು, ಹೆಚ್ಚಿನವುಗಳನ್ನು ಇಸ್ರೇಲ್ ತಲುಪುವ ಮುನ್ನವೇ ಆಕಾಶದಲ್ಲೇ ನಾಶಪಡಿಸಿತು. ಇದರ ಪ್ರತಿಕ್ರಿಯೆಯಾಗಿ ಇಸ್ರೇಲ್ ಯೆಮನ್‌ನ ಹೌತಿ ನಿಯಂತ್ರಿತ ಪ್ರದೇಶಗಳ ಮೇಲೆ ವೈಮಾನಿಕ ದಾಳಿಗಳನ್ನು ನಡೆಸಿದೆ.
ಇಸ್ರೇಲ್ ರಕ್ಷಣಾ ಸಚಿವರು ಹೇಳಿಕೆ ನೀಡಿದ್ದು, ಘಮರಿ ಮೇಲೆ ನಾವು ವೈಮಾನಿಕ ದಾಳಿ ನಡೆಸಿದ್ದೇವೆ. ಯಾವುದೇ ಬೆದರಿಕೆಗಳ ವಿರುದ್ಧ ಕಠಿಣ ಕ್ರಮಗಳನ್ನು ಮುಂದುವರೆಸುತ್ತೇವೆ ಎಂದು ಹೌತಿ ಬಂಡುಕೋರರಿಗೆ ಎಚ್ಚರಿಕೆ ನೀಡಿದೆ.

